2.5ಲಕ್ಷ ಮೆಟ್ರಿಕ್ ಟನ್ ಮಾವಿನ ಹಣ್ಣು ಖರೀದಿಗೆ ಕೇಂದ್ರ ಅನುಮೋದನೆ

ಸಾಂದರ್ಭಿಕ ಚಿತ್ರ (Grok)
ಬೆಂಗಳೂರು, ನ. 2: ಕರ್ನಾಟಕ ರಾಜ್ಯದಲ್ಲಿ 2025-26ನೇ ಋತುವಿನಲ್ಲಿ ಬೆಲೆ ಕೊರತೆ ಪಾವತಿ ಯೋಜನೆಯಡಿಯಲ್ಲಿ ಕ್ವಿಂಟಾಲ್ಗೆ 1,616 ರೂ. ಮಾರುಕಟ್ಟೆ ಮಧ್ಯಪ್ರವೇಶದ ಬೆಲೆಯಲ್ಲಿ 2.5ಲಕ್ಷ ಮೆಟ್ರಿಕ್ ಟನ್ ಮಾವಿನಹಣ್ಣು ಖರೀದಿಗೆ ಕೇಂದ್ರ ಸರಕಾರವು ಅನುಮೋದನೆ ನೀಡಿದೆ.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಮನವಿಗೆ ಸ್ಪಂದಿಸಿರುವ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಈ ವಿಷಯ ತಿಳಿಸಿದ್ದಾರೆ. ಇದರಿಂದ ಬೆಲೆ ಕುಸಿತದಿಂದ ಕಂಗಾಲಾಗಿದ್ದ ಮಾವು ಬೆಳೆಗಾರರಿಗೆ ಅನುಕೂಲ ಆಗಲಿದೆ. ದೇವೇಗೌಡರ ಮನವಿಗೆ ಸ್ಪಂದಿಸಿರುವ ಕೇಂದ್ರ ಸಚಿವರು ಮಾವು ಬೆಳೆಗಾರರಿಗೆ ನೆರವಿನ ಹಸ್ತ ಚಾಚಿದ್ದಾರೆ.
ಕರ್ನಾಟಕದ ಮಾವು ಬೆಳೆಗಾರರನ್ನು ಬೆಂಬಲಿಸಲು ಕೇಂದ್ರ ಸರಕಾರವು ತಕ್ಷಣ ಮಧ್ಯಪ್ರವೇಶಿಸಬೇಕು. ಕಡಿಮೆ ಇಳುವರಿ, ಹವಾಮಾನ ವೈಪರೀತ್ಯ ಮತ್ತು ಮಾವಿನಹಣ್ಣಿನ ಅಂತರಾಜ್ಯ ಸಾಗಣೆಯ ಮೇಲಿನ ನಿರ್ಬಂಧಗಳಿಂದ ಉಂಟಾದ ಬೆಲೆ ಕುಸಿತದ ಬಗ್ಗೆ ಮಾಜಿ ಪ್ರಧಾನಿ ಪತ್ರದಲ್ಲಿ ಉಲ್ಲೇಖಿಸಿದ್ದರು. ಈ ಸಮಸ್ಯೆಗಳಿಂದ ವಿಶೇಷವಾಗಿ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಮಾವು ಬೆಳೆಗಾರರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತ್ತು.
ನಫೆಡ್ ಮತ್ತು ಎನ್ಸಿಸಿಎಫ್ ಮಾವಿನ ಹಣ್ಣು ಖರೀದಿಗಾಗಿ ಬೆಲೆ ಕೊರತೆ ಪಾವತಿ ಮತ್ತು ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯನ್ನು ಪ್ರಾರಂಭಿಸುವಂತೆಯೂ ದೇವೇಗೌಡ ಕೇಂದ್ರ ಸರಕಾರವನ್ನು ವಿನಂತಿಸಿದ್ದರು. ಈ ಉಪಕ್ರಮ ಕೈಗೊಳ್ಳುವ ಮೂಲಕ ಬೆಳೆಗಾರರಿಗೆ ಲಾಭದಾಯಕ ಬೆಲೆಗಳು ಮತ್ತು ಆರ್ಥಿಕ ಸಂಕಷ್ಟದಿಂದ ಪರಿಹಾರವನ್ನು ನೀಡುತ್ತದೆ ಎಂದು ಮನವರಿಕೆ ಮಾಡಿದ್ದರು.







