ಸಾಹಿತ್ಯ ರಚನೆ ಸಮಾಜದ ಓರೆ-ಕೋರೆಗಳ ತಿದ್ದುವಂತಿರಬೇಕು: ಬಾನು ಮುಷ್ತಾಕ್

ಬಾನು ಮುಷ್ತಾಕ್
ಬೆಂಗಳೂರು : ‘ಸಾಹಿತ್ಯ ರಚನೆ ಸಮಾಜದ ಓರೆ-ಕೋರೆಗಳನ್ನು ತಿದ್ದುವಂತಿರಬೇಕು’ ಎಂದು ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತೆ, ಪ್ರಸಿದ್ಧ ಲೇಖಕಿ ಬಾನು ಮುಷ್ತಾಕ್ ತಿಳಿಸಿದ್ದಾರೆ.
ಶನಿವಾರ ನಗರದ ಫ್ರೀಡಂಪಾರ್ಕ್ನಲ್ಲಿ ನಡೆದ ಬೆಂಗಳೂರು ಸಾಹಿತ್ಯ ಉತ್ಸವ-2025ರ ವಿಚಾರ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಹಿತ್ಯದಂಥ ರಚನೆಗಳು ಅಂಧಕಾರದಲ್ಲಿದ್ದವರಿಗೆ ದೀಪದ ಬೆಳಕಿನಂತೆ!. ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಾಹಿತ್ಯ ಇರಬೇಕಾಗಿರುವುದು ಅನಿವಾರ್ಯ ಎಂದರು.
ತಾನು ವಕೀಲೆ ವೃತ್ತಿ ಮಾಡುತ್ತಿರುವ ಸಂದರ್ಭದಲ್ಲಿಯೇ ಹಲವು ಕೃತಿಗಳನ್ನು ಓದಿಕೊಂಡಿದ್ದೆ. ಈ ವೇಳೆಯಲ್ಲಿಯೇ ಬರಹಗಳು, ಸಾಹಿತ್ಯ ರಚನೆಯಲ್ಲೂ ತೊಡಗಿಸಿಕೊಂಡಿದ್ದೆ. ಮುಖ್ಯವಾಗಿ ಅಂದಿನ ಕಾಲಘಟ್ಟದ ಸಮಾಜದಲ್ಲಿ ಹಲವಾರು ಸಮಸ್ಯೆಗಳನ್ನು ಕಣ್ಣಾರೆ ಕಂಡು ಅವುಗಳ ಅಂತರಂಗವನ್ನು ಅರಿತುಕೊಂಡಿದ್ದೆ. ಆ ನಂತರ ಅವುಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ನನ್ನ ಮನಸ್ಸು ತುಡಿಯುತಿತ್ತು ಎಂದು ಬಾನು ಮುಷ್ತಾಕ್ ಮೆಲುಕು ಹಾಕಿದರು.
ಸಾಹಿತಿ ಕೃಷ್ಣಮೂರ್ತಿ ಹನೂರು, ಲೇಖಕಿ ಅರ್ಷಿಯಾ ಸತ್ತರ್ ಮಾತನಾಡಿದರು.
ಬೆಂಗಳೂರು ಸಾಹಿತ್ಯ ಉತ್ಸವದ ಮೂರು ವೇದಿಕೆಗಳಲ್ಲಿ 50ಕ್ಕೂ ಹೆಚ್ಚು ವಿವಿಧ ವಿಷಯಗಳಡಿ ಗೋಷ್ಠಿಗಳು ಜರುಗಿದವು. ಸಾಹಿತಿಗಳು, ಲೇಖಕರು, ಯುವ ಬರಹಗಾರು ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.
‘ಪುಟ್ಟ ಮಕ್ಕಳಿಗಾಗಿಯೇ ಮೂರು ಸಾಹಿತ್ಯ ವೇದಿಕೆ ಸೃಷ್ಟಿ!’: ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಹಿರಿಯ ಸಾಹಿತಿ, ಲೇಖಕರು, ವಿಷಯ ತಜ್ಞರಿಗಷ್ಟೇ ಸೀಮಿತವಾಗಿರದೆ ಪ್ರತ್ಯೇಕವಾಗಿ ಪುಟ್ಟ ಮಕ್ಕಳಿಗಾಗಿಯೇ ಮೂರು ಸಾಹಿತ್ಯ ವೇದಿಕೆಗಳನ್ನು ಸೃಷ್ಟಿಸಿದ್ದು ವಿಶೇಷವಾಗಿತ್ತು. ಇಂದಿನ ಮಕ್ಕಳು ಮೊಬೈಲ್ ಘೀಳಿನಲ್ಲಿ ಸಿಲುಕಿರುವ ಸಂದಿಗ್ಧ ಸ್ಥಿತಿಯಲ್ಲಿ ಸಾಹಿತ್ಯ ಉತ್ಸವದಲ್ಲಿ ಮಕ್ಕಳಿಗೆ ಸಂಬಂಧಿಸಿದ ಮೂರು ವೇದಿಕೆಗಳು ಸಾಕಷ್ಟು ಮಂದಿಯನ್ನು ಗಮನಸೆಳೆದವು ಕಥೆ, ಪದ್ಯ, ಪಾಠಗಳನ್ನು ನುರಿತ ವಿಷಯ ತಜ್ಞರು ಪುಟ್ಟ ಮಕ್ಕಳಿಗೆ ಹೇಳಿಕೊಟ್ಟು ಅವರನ್ನು ಕ್ರಿಯಾಶೀಲವಾಗಿ ಪಾಲ್ಗೊಳ್ಳುವಂತೆ ಮಾಡುತ್ತಿದ್ದ ವೈಖರಿ ವಿಶೇಷತೆಯಿಂದ ಕೂಡಿತ್ತು.







