ವಾಲ್ಮೀಕಿ ಅಕ್ರಮ | ಸಿಎಂ, ಬಳ್ಳಾರಿ ಸಂಸದರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಎಸ್ಟಿ ಮೋರ್ಚಾದಿಂದ ಹೋರಾಟ
ಬೆಂಗಳೂರು: ವಾಲ್ಮೀಕಿ ನಿಗಮದ ಅಕ್ರಮದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಳ್ಳಾರಿ ಲೋಕಸಭಾ ಕ್ಷೇತ್ರದ ಸಂಸದ ಇ.ತುಕರಾಮ್ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ಎಸ್ಟಿ ಮೋರ್ಚಾದಿಂದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ತಿಳಿಸಿದ್ದಾರೆ.
ಶುಕ್ರವಾರ ನಗರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ತುಕರಾಂ ರಾಜೀನಾಮೆಗೆ ಆಗ್ರಹಿಸಿ ಮತ್ತು ರಾಹುಲ್ ಗಾಂಧಿಯವರ ಮೀಸಲಾತಿ ರದ್ದತಿ ಕುರಿತ ಹೇಳಿಕೆಯನ್ನು ಖಂಡಿಸಿ ಸೆ.17ಕ್ಕೆ ಮೋರ್ಚಾ ವತಿಯಿಂದ ಸಂಡೂರಿನಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳುತ್ತೇವೆ. ನಿಗಮದ ಹಣದ ಅವ್ಯವಹಾರ ನಡೆದಿದ್ದು, ಆ ಹಣವನ್ನು ಪ್ರತಿ ಬೂತಿಗೆ 25ಸಾವಿರ ರೂ. ಹಣದಂತೆ ಹಂಚಿದ್ದಾರೆ. ಪ್ರತಿ ಮತಕ್ಕೆ 200 ರೂ.ಹಂಚಲಾಗಿದೆ ಎಂದು ಆರೋಪಿಸಿದರು.
ಸಂಸದ ತುಕರಾಂ ಅವರ ಸದಸ್ಯತ್ವ ರದ್ದು ಮಾಡಲು ಆಗ್ರಹಿಸಿ ಶೀಘ್ರವೇ ಚುನಾವಣಾ ಆಯೋಗಕ್ಕೆ ದೂರು ನೀಡಲಿದ್ದೇವೆ. ಅವರ ವಿರುದ್ಧ ಮಾಜಿ ಸಚಿವ ಬಿ.ಶ್ರೀರಾಮುಲು ಹೈಕೋರ್ಟಿನಲ್ಲಿ ದಾವೆ ಹೂಡಲಿದ್ದಾರೆ. ಕಾಂಗ್ರೆಸ್ ಪಕ್ಷವು ಹಿಂದಿನಿಂದ ದಲಿತ ವಿರೋಧಿ ಧೋರಣೆಯನ್ನೇ ಹೊಂದಿದೆ. ದಲಿತರ ಪರ ಎನ್ನುವ ಅವರು ಮಾಡುವುದು ಅನಾಚಾರ. ದಲಿತರನ್ನು ತುಳಿಯುವ ಕೆಲಸವನ್ನೇ ಮಾಡುತ್ತಾರೆ ಎಂದು ಅವರು ಟೀಕಿಸಿದರು.