ಬೆಂಗಳೂರು | ‘ಈದ್ ಮಿಲಾದ್ ಆಚರಣೆ’ಗೆ ಪೊಲೀಸ್ ಆಯುಕ್ತರ ಮಾರ್ಗಸೂಚಿ
ಬೆಂಗಳೂರು : ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಸೆ.16ರಂದು ನಗರದ ವಿವಿಧ ಮೈದಾನಗಳಲ್ಲಿ ಕಾರ್ಯಕ್ರಮಗಳು ಹಾಗೂ ವಿವಿಧ ಭಾಗಗಳಿಂದ ಸ್ತಬ್ಧಚಿತ್ರಗಳ ಮೆರವಣಿಗೆ ನಡೆಯಲಿದ್ದು, ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಕೆಲ ಕಟ್ಟುನಿಟ್ಟಿನ ಸೂಚನೆಗಳನ್ನು ಪಾಲಿಸಬೇಕು, ಇಲ್ಲದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರಿನ ವೈ.ಎಂ.ಸಿ.ಎ. ಮೈದಾನ, ಮಿನರ್ವ ರಸ್ತೆ ಖುದ್ದುಸಾಬ್ ಈದ್ಗಾ ಮೈದಾನ, ಶಿವಾಜಿನಗರ ಛೋಟಾ ಮೈದಾನ, ಭಾರತೀನಗರದ ಸುಲ್ತಾನ್ಜೀ ಗುಂಟಾ ಮೈದಾನಗಳಲ್ಲಿ ಹಾಗೂ ಇತರೆಡೆಗಳಲ್ಲಿ ಈದ್ಮಿಲಾದ್ ಹಬ್ಬದ ದಿನ ಮುಸ್ಲಿಮರು ಮೆರವಣಿಗೆ ನಡೆಸಲಿದ್ದಾರೆ. ಈ ಸಂಬಂಧ ಪೊಲೀಸರ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.
ಮೆರವಣಿಗೆಗಳ ಆಯೋಜಕರು ತಾವು ಸಾಗುವ ಮಾರ್ಗದಲ್ಲಿ ಸಾರ್ವಜನಿಕರಿಗೆ, ಸುಗಮ ಸಂಚಾರಕ್ಕೆ ಆಡಚಣೆಗಳು ಉಂಟಾಗದಂತೆ ಸ್ವಯಂಸೇವಕರ ಮೂಲಕ ರಸ್ತೆಯ ಎರಡು ಬದಿಯಲ್ಲಿ ನಿಂತು ಸೂಕ್ತ ನಿರ್ದೇಶನಗಳನ್ನು ನೀಡಬೇಕು. ಮೆರವಣಿಗೆ ಶಾಂತ ರೀತಿಯಲ್ಲಿ ಸಾಗುವಂತೆ ಸಹಕರಿಸಬೇಕು ಎಂದು ಅವರು ತಿಳಿಸಿದರು.
ಮೆರವಣಿಗೆಯಲ್ಲಿ ಪಾಲ್ಗೊಳ್ಳುವವರು ಯಾವುದೇ ಹರಿತವಾದ ವಸ್ತುಗಳನ್ನು ಹೊಂದಿರಬಾರದು. ಮೆರವಣಿಗೆಯ ಸಮಯದಲ್ಲಿ ಯಾವುದೇ ಕಾರಣಕ್ಕೂ ಡಿ.ಜೆ. ಸೌಂಡ್ ಸಿಸ್ಟಂಗಳನ್ನು ಬಳಸಬಾರದು. ಮೆರವಣಿಗೆಯಲ್ಲಿ ಬಳಸುವ ಸ್ತಬ್ಧಚಿತ್ರಗಳು ಯಾವುದೇ ಪ್ರಚೋದನಾತ್ಮಕ ಅಂಶಗಳನ್ನೊಳಗೊಂಡಿರಬಾರದು. ಮೆರವಣಿಗೆಯ ಸಂದರ್ಭದಲ್ಲಿ ಯಾವುದೇ ಪೂಜಾ ಸ್ಥಳಗಳು(ದೇವಸ್ಥಾನ/ಚರ್ಚ್ಗಳ) ಮುಂಭಾಗದಲ್ಲಿ ಘೋಷಣೆಗಳನ್ನು ಕೂಗಬಾರದು ಎಂದು ಬಿ.ದಯಾನಂದ್ ಹೇಳಿದರು.
ಮೆರವಣಿಗೆಯ ಆಯೋಜಕರು ವಿದ್ಯುತ್(ಕೆ.ಇ.ಬಿ) ಇಲಾಖೆಯಿಂದ ಸಿಬ್ಬಂದಿಯನ್ನು ನೇಮಿಸಿಕೊಂಡು ಯಾವುದೇ ವಿದ್ಯುತ್ ಸಂಪರ್ಕಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಮೆರವಣಿಗೆಯ ಸಂದರ್ಭದಲ್ಲಿ ಆಯೋಜಕರು ಬೆಂಕಿ ನಂದಿಸುವ ಸಾಮಗ್ರಿ ಇಟ್ಟುಕೊಂಡಿರಬೇಕು. ಮೆರವಣಿಗೆ ಮುಗಿದ ನಂತರ ದ್ವಿಚಕ್ರ ವಾಹನದಲ್ಲಿ ಇಬ್ಬರಿಗಿಂತ ಹೆಚ್ಚು ಜನ ಪ್ರಯಾಣಿಸಬಾರದು. ಹಾಗೂ ಹಿರಿಯ ನಾಗರಿಕರಿಗೆ ಶಾಲಾ ಮಕ್ಕಳು ಮತ್ತಿತರರಿಗೆ ತೊಂದರೆಯಾಗದಂತೆ ಧ್ವನಿವರ್ಧಕಗಳನ್ನು ಕಡಿಮೆ ಪ್ರಮಾಣದ ಶಬ್ದದೊಂದಿಗೆ ಬೆಳಗ್ಗೆ 6ಗಂಟೆಯಿಂದ ರಾತ್ರಿ 10ರವರೆಗೆ ಮಾತ್ರ ಬಳಸಿಕೊಳ್ಳಬೇಕು (ಸ್ಥಳೀಯ ಪೊಲೀಸರ ಅನುಮತಿ/ಪರವಾನಗಿಯೊಂದಿಗೆ) ಎಂದು ಬಿ.ದಯಾನಂದ್ ಸೂಚಿಸಿದರು.
ಪೊಲೀಸ್ ಇಲಾಖೆಯಿಂದ ವಿಧಿಸಲಾಗಿರುವ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬಿ.ದಯಾನಂದ್ ಎಚ್ಚರಿಕೆ ನೀಡಿದರು.