ಮದುವೆಗೆ ಕರೆದು ಊಟದ ವೇಳೆ ಅವಮಾನ ಮಾಡಿಲ್ಲ: ಸುಳ್ಳು ಸುದ್ದಿ ಹರಡಲಾಗಿದೆ ಎಂದ ವ್ಯಕ್ತಿ

ಬೆಂಗಳೂರು: ಮದುವೆಯ ಊಟಕ್ಕೆ ಕುಳಿತ ವ್ಯಕ್ತಿಗೆ ʼಊಟ ಹಾಕುವುದಿಲ್ಲ, ನೀವು ತಿಲಕ ಇಟ್ಟಿದ್ದೀರಿ ಎಂದು ಹಿಂದೂವಿಗೆ ಅವಮಾನ ಮಾಡಲಾಗಿದೆʼ ಎಂದು ಕೆಲವು ಮಾಧ್ಯಮಗಳು ಸುದ್ದಿ ಮಾಡಿದ್ದವು. ಅದರೆ ಈ ಸುದ್ದಿ ಸಂಪೂರ್ಣ ಸುಳ್ಳು ಎಂದು ಮದುವೆಯಲ್ಲಿ ಭಾಗವಹಿಸಿದ್ದರು ಎನ್ನಲಾದ, ರಾಜು ವೀಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ.
"ನನ್ನ ಸೆಲೂನಿಗೆ ಬರ್ತಾ ಇದ್ದ ಒಬ್ಬರು, ಮದುವೆಗೆ ಕರೆದಿದ್ದರು. ಹಾಗಾಗಿ ಹೋಗಿದ್ದೆ. ನಾನು ಊಟ ಮಾಡುವಾಗ ಮುಸ್ಲಿಮರು ಎಬ್ಬಿಸಿದ್ದು ಅಲ್ಲ. ನಾನು ಊಟ ಮಾಡುವಾಗ ಒಬ್ಬನೇ ಕುಳಿತಿದ್ದೆ. ಈ ವೇಳೆ ಒಬ್ಬನೇ ಯಾಕೆ ಕುಳಿತಿದ್ದೀಯಾ ನಮ್ಮೆಲ್ಲರ ಜೊತೆ ಊಟಕ್ಕೆ ಕುಳಿತುಕೋ ಎಂದು ಕರೆದುಕೊಂಡು ಹೋಗಿದ್ದಾರೆ. ಅಷ್ಟೇ ವಿನಃ ಬೇರೇನೂ ಇಲ್ಲ. ನಾನು ಅವರ ಜೊತೆ ಊಟ ಮಾಡಿ ಬಂದೆ. ಕೆಲವರು ಆ ವಿಡಿಯೋವನ್ನು ಈ ರೀತಿ ಮಾಡಿರೋದು ನನಗೆ ಗೊತ್ತೇ ಇಲ್ಲ" ಎಂದು ಅವರು ಹೇಳಿದ್ದಾರೆ.
ಏನಿದು ಘಟನೆ?
ಮದುವೆಯಲ್ಲಿ ಊಟಕ್ಕೆ ಕುಳಿತ ವ್ಯಕ್ತಿಗಳನ್ನು ಎಬ್ಬಸಿ ಅವಮಾನ ಮಾಡಿ ಕಳುಹಿಸಿದ್ದಾರೆ ಎನ್ನಲಾದ ವೀಡಿಯೊ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ನಿಮಗೆ ಊಟ ಹಾಕುವುದಿಲ್ಲ, ನೀವು ತಿಲಕ ಇಟ್ಟಿದ್ದೀರಿ ಎಂದು ಹಿಂದೂವಿಗೆ ಅವಮಾನ ಮಾಡಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇಸ್ಲಾಂಪುರದ ನಿವಾಸಿ ಸಮಿವುಲ್ಲಾ ಕುಟುಂಬದ ಮದುವೆ ಕಾರ್ಯಕ್ರಮಕ್ಕೆ ರಾಜು ಎಂಬುವರನ್ನು ಆಹ್ವಾನಿಸಿದಾಗ ಈ ಘಟನೆ ನಡೆದಿದೆ ಎನ್ನಲಾಗಿತ್ತು.
ನೆಲಮಂಗಲದ ಖಾಸಗಿ ಕಲ್ಯಾಣ ಮಂಟಪದಲ್ಲಿ ಮುಝಮ್ಮಿಲ್ ಪಾಷ ಹಾಗೂ ಸಾನಿಯಾ ಜೋಡಿ ಮದುವೆ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಆಹ್ವಾನ ನೀಡಿದ್ದ ಕಾರಣ ಕೆಲಸವನ್ನು ಬೇಗನೆ ಮುಗಿಸಿ ಅಂಗಡಿ ಬಂದ್ ಮಾಡಿದ ರಾಜು ಮದುವೆಗೆ ತೆರಳಿದ್ದರು. ಎಲ್ಲರೊಂದಿಗೆ ಊಟಕ್ಕೆ ಕುಳಿತಿದ್ದರು.
ಪಂಕ್ತಿಯಲ್ಲಿ ಕುಳಿತಿದ್ದ ರಾಜು ನೋಡಿದ ಮದುವೆ ಕುಟುಂಬಸ್ಥರು, ತಿಲಕ ಇಟ್ಟವರಿಗೆ ಊಟ ಹಾಕುವುದಿಲ್ಲ. ನಿಮ್ಮನ್ನು ಯಾರು ಕರೆದಿದ್ದು, ಹಿಂದೂಗಳಿಗೆ ನಾವು ಊಟ ಹಾಕುವುದಿಲ್ಲ ಇಲ್ಲಿಂದ ಎದ್ದು ಹೋಗಿ ಎಂದು ರಾಜುವಿಗೆ ಅವಮಾನ ಮಾಡಿದ್ದಾರೆ ಎಂದು Asianet News Kannada, TV9 ನಲ್ಲಿ ವರದಿಯಾಗಿತ್ತು.
ಆದರೆ ಇದು ಸಂಪೂರ್ಣ ಸುಳ್ಳು ಎಂದು ರಾಜು ವೀಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ.







