ವಿದ್ಯಾವಂತರನ್ನು ವಿಚಾರವಂತರನ್ನಾಗಿ ಮಾಡಬೇಕಿದೆ : ಬಿ.ಟಿ.ಲಲಿತಾ ನಾಯಕ್
ಬೆಂಗಳೂರು : ದೇಶದಲ್ಲಿ ವಿದ್ಯಾವಂತರಿದ್ದಾರೆ ಆದರೆ, ವಿದ್ಯಾವಂತರೆಲ್ಲರೂ ವಿಚಾರವಂತರಾಗಿಲ್ಲ. ಅವರನ್ನು ವಿಚಾರವಂತರನ್ನಾಗಿ ಮಾಡುವ ಜವಾಬ್ದಾರಿ ಸರಕಾರದ ಮೇಲಿದೆ ಎಂದು ಮಾಜಿ ಸಚಿವೆ ಹಿರಿಯ ಸಾಹಿತಿ ಬಿ.ಟಿ.ಲಲಿತಾ ನಾಯಕ್ ಹೇಳಿದ್ದಾರೆ.
ಬುಧವಾರ ನಗರದ ಪುರಭವನದ ಮುಂಭಾಗ ಹಮ್ಮಿಕೊಂಡಿದ್ದ ‘ವೈಜ್ಞಾನಿಕ ಮನೋಧರ್ಮದೊಂದಿಗೆ ಸೂರ್ಯಗ್ರಹಣ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಮವಾಸ್ಯೆ, ಹುಣ್ಣಿಮೆ, ಗ್ರಹಣಗಳೆಲ್ಲವೂ ಸೌರವ್ಯೂಹದಲ್ಲಿ ನಡೆಯುವ ಪ್ರಕೃತಿಯ ಚಲನೆಗಳು. ಅದನ್ನು ನೋಡಿಕೊಂಡು ಬದುಕಲು ಸಾಧ್ಯವಿಲ್ಲ. ಪ್ರಕೃತಿಯ ಕೆಲಸ ಅದು ಮಾಡುತ್ತದೆ, ನಮ್ಮ ಕೆಲಸ ನಾವು ಮಾಡಬೇಕು ಎಂದು ಹೇಳಿದರು.
ಅಮಾವಾಸ್ಯೆ, ಹುಣ್ಣಿಮೆ, ಗ್ರಹಣದ ದಿನ ಎಲ್ಲಿಯೂ ಹೋಗಬಾರದು ಎನ್ನುವ ಕಟ್ಟಲೆಗಳನ್ನು ಹಾಕಿಕೊಂಡು, ಶಾಸ್ತ್ರಗಳನ್ನು ಸೃಷ್ಟಿಮಾಡಿ, ಅವುಗಳನ್ನು ಪಾಲಿಸಿಲ್ಲವೆಂದರೆ ಒಳಿತಾಗುವುದಿಲ್ಲ ಎನ್ನುವ ಭೀತಿ ಹುಟ್ಟಿಸಿ ಜನರನ್ನು ಮರುಳು ಮಾಡಿ ಸ್ವಂತವಾಗಿ ಏನನ್ನು ಯೋಚಿಸಲು ಸಾಧ್ಯವಾಗದೇ ಇರುವ ರೀತಿಯಲ್ಲಿ ಪುರೋಹಿತಶಾಹಿಗಳು, ಜ್ಯೋತಿಷ್ಯರು ಸುಲಿಗೆ ಮಾಡುತ್ತಿದ್ದಾರೆ. ಜನ ಇಂತಹ ಪುರೋಹಿತಶಾಹಿ ಮನಸ್ಥಿತಿಗಳಿಗೆ ಬಲಿಯಾಗಬಾರದು ಎಂದು ಲಲಿತಾ ನಾಯಕ್ ಸಲಹೆ ನೀಡಿದರು.
ಅಮವಾಸ್ಯೆ-ಹುಣ್ಣಿಮೆಗಳು ಜನರನ್ನು ಏನು ಮಾಡುವುದಿಲ್ಲ. ಅದೆಲ್ಲವೂ ಜನರ ಭ್ರಮೆ, ಆ ಭ್ರಮೆಯನ್ನು ಭಿತ್ತುವ ಜನಗಳಿಂದ ದೂರು ಇರಬೇಕು. ಮೂಢನಂಬಿಕೆ ವಿಚಾರ ಮಾತಾಡಿ ದಾರಿಯಲ್ಲಿ ಏನಾದರೂ ಆಕಸ್ಮಿಕ ಅಪಘಾತಗಳಾದರೆ, ಮೌಢ್ಯ ವಿರೋಧಿಸಿದ್ದಕ್ಕಾಗಿಯೇ ಹೀಗಾಗಿದ್ದು ಎಂದು ನಂಬಬಾರದು. ಶತ-ಶತಮಾನಗಳಿಂದ ಮೌಢ್ಯವನ್ನು ಆಳವಾಗಿ ಸಮಾಜದಲ್ಲಿ ಬಿತ್ತಿರುವುದರಿಂದ ಸುಲಭವಾಗಿ ಮೌಢ್ಯ ಹೋಗಲಾಡಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಈ ವೇಳೆಯಲ್ಲಿ ಅನೇಕ ಪ್ರಗತಿಪರ ಚಿಂತಕರು, ಹೋರಾಟಗಾರರು, ಸಾಹಿತಿಗಳು ಭಾಗವಹಿಸಿ ಕಾರ್ಯಕ್ರಮದಲ್ಲಿ ಊಟ, ತಿಂಡಿ ತಿನಿಸುಗಳನ್ನು ತಿಂದು ಮೌಢ್ಯ ಅಳಿಯಲಿ, ವಿಜ್ಞಾನ ಬೆಳೆಯಲಿ ಎನ್ನುವ ಸಂದೇಶ ಸಾರಿದರು.
‘ಸೂರ್ಯಗ್ರಹಣ, ಚಂದ್ರಗ್ರಹಣ ಪ್ರಕೃತಿಯ ನಿಯಮ. ಗ್ರಹಣದಿಂದ ಜನರಿಗೆ ಯಾವ ತೊಂದರೆಯೂ ಇಲ್ಲ. ಕೆಲ ಜ್ಯೋತಿಷಿಗಳು ಜನರಲ್ಲಿ ಮೂಢನಂಬಿಕೆ ಬಿತ್ತುತ್ತಿರುವುದರಿಂದ ತೊಂದರೆಗಳಾಗುತ್ತಿವೆ. ವಿಜ್ಞಾನಿಗಳು ಕನ್ನಡಕ ಹಾಕಿಕೊಂಡು ಗ್ರಹಣ ನೋಡಬಹುದೆಂದು ಹೇಳುತ್ತಾರೆ. ಆದರೆ, ಜ್ಯೋತಿಷ್ಯರು ಗ್ರಹಣ ಸಂದರ್ಭದಲ್ಲಿ ಮನೆಯಿಂದ ಹೊರಬಾರದೆಂದು ಮೌಢ್ಯವನ್ನು ಹೇರುತ್ತಿರುವುದು ಸಂವಿಧಾನ ವಿರೋಧಿ. ಆದ್ದರಿಂದ ನಾವೆಲ್ಲ ವಿಜ್ಞಾನದ ನಡೆಗೆ-ನಮ್ಮ ನಡಿಗೆ ಕಾರ್ಯಕ್ರಮ ಗ್ರಹಣದ ದಿನ ಮಾಡುತ್ತಾ ವೈಜ್ಞಾನಿಕ ಚಿಂತನೆ ಬೆಳೆಸುತ್ತಿದ್ದೇವೆ’
-ನರಸಿಂಹಮೂರ್ತಿ, ವಕೀಲ