ಹಿಡಕಲ್ ಡ್ಯಾಮ್‍ನಿಂದ ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ನೀರು; ಅಧಿಕಾರಿಗಳಿಗೆ ವರದಿ ಕೇಳಿದ್ದೇನೆ : ಡಿ.ಕೆ.ಶಿವಕುಮಾರ್

ಬೆಂಗಳೂರು : ಬೆಳಗಾವಿಯ ಹಿಡಕಲ್ ಅಣೆಕಟ್ಟಿನಿಂದ ಧಾರವಾಡ ಕೈಗಾರಿಕಾ ಪ್ರದೇಶಕ್ಕೆ 5 ಟಿಎಂಸಿ ನೀರು ತೆಗೆದುಕೊಂಡು ಹೋಗಲಾಗಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ವರದಿ ಕೇಳಿದ್ದೇನೆ. ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ರವಿವಾರ ಬೆಳಗಾವಿ ನಗರದಲ್ಲಿ ಈ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹುಕ್ಕೇರಿ ಶಾಸಕ ನಿಖಿಲ್ ಕತ್ತಿ ಅವರು ನನ್ನನ್ನು ಭೇಟಿ ಮಾಡಿ ಚರ್ಚೆ ಮಾಡಿ ಕೆಲವು ವಿಚಾರ ತಿಳಿಸಿದ್ದಾರೆ. ಈ ವಿಚಾರವಾಗಿ ನಾನು ಪರಿಶೀಲನೆ ಮಾಡಿ ವರದಿ ಕೇಳಿದ್ದೇನೆ. ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ರೈತರಿಗೆ ಆಗಲಿ, ಕೈಗಾರಿಕೆ ಅಥವಾ ನಗರ ಪ್ರದೇಶಗಳ ಕುಡಿಯುವ ನೀರಿಗೆ ಆಗಲಿ ಎಲ್ಲದಕ್ಕೂ ಅದರದೇ ಆದ ನಿರ್ದಿಷ್ಟ ಲೆಕ್ಕಾಚಾರಗಳು ಇರುತ್ತವೆ. ನೀರನ್ನು ಯಾರೇ ಆಗಲಿ ಈ ರೀತಿ ಬಳಸಲು ಆಗುವುದಿಲ್ಲ. 5 ಟಿಎಂಸಿ ನೀರನ್ನು ಬೆಂಗಳೂರಿಗೆ ನೀಡಲು ಆಗುತ್ತಿಲ್ಲ. ಇಲ್ಲಿ ಹೇಗೆ ತೆಗೆದುಕೊಂಡು ಹೋಗಲು ಸಾಧ್ಯ. ಯಾರೋ ಹೇಳಿದರು ಎಂದ ಮಾತ್ರಕ್ಕೆ ನಾವು ಉತ್ತರ ಕೊಡಲು ಆಗುವುದಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಯಾವುದಕ್ಕೆ ನೀರು ಬಿಡಬೇಕಾದರೆ ಅಧಿಕೃತ ಅನುಮತಿ ಬೇಕು. ಕೈಗಾರಿಕೆಗಳಿಗೆ ನೀರು ನೀಡುವಾಗ ನಾನು ದರವನ್ನು ಹೆಚ್ಚಿಸಿದ್ದೇನೆ. ಈ ವಿಚಾರವಾಗಿ ಕೇಂದ್ರ ಸರಕಾರ ಮಾರ್ಗಸೂಚಿ ಕಳುಹಿಸಿದೆ. ನೀರಿನ ಬಳಕೆ ಬಗ್ಗೆ ಹೊಸ ನೀತಿ ನೀಡಿದೆ. ಮುಂದಿನ ಅಧಿವೇಶನದಲ್ಲಿ ನಾವು ಅದನ್ನು ಪ್ರಸ್ತಾಪ ಮಾಡುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.







