‘ಮೈಕ್ರೊ ಫೈನಾನ್ಸ್’ ನಿಯಂತ್ರಣಕ್ಕೆ ಸುಗ್ರೀವಾಜ್ಞೆ | ಒಂದೆರಡು ದಿನಗಳಲ್ಲಿ ರಾಜ್ಯಪಾಲರಿಗೆ ಕಳುಹಿಸಲಾಗುವುದು : ಡಿ.ಕೆ.ಶಿವಕುಮಾರ್

ಬೆಂಗಳೂರು : ‘ಬಡವರ ರಕ್ಷಣೆ ನಮ್ಮ ಸರಕಾರದ ಕರ್ತವ್ಯ. ಸಾಲ ವಸೂಲಿ ಹೆಸರಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಬಡವರಿಗೆ ಆಗುತ್ತಿರುವ ಕಿರುಕುಳ ತಪ್ಪಿಸಲು ಸರಕಾರ ಸುಗ್ರೀವಾಜ್ಞೆ ರೂಪಿಸಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಸೋಮವಾರ ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ‘ಸಾಲ ವಸೂಲಿ ಮಾಡಲು ರೌಡಿಗಳ ಮೂಲಕ ಬೆದರಿಸಿ, ಕಾನೂನು ಕೈಗೆ ತೆಗೆದುಕೊಂಡು, ಬಡವರ ಮೇಲೆ ದಬ್ಬಾಳಿಕೆ ನಡೆಸಲು ನಮ್ಮ ಸರಕಾರ ಅವಕಾಶ ನೀಡುವುದಿಲ್ಲ. ಇದನ್ನು ನಿಯಂತ್ರಿಸಲು ಪೊಲೀಸರಿಗೆ ಹೆಚ್ಚಿನ ಅಧಿಕಾರ ನೀಡಲಾಗುವುದು’ ಎಂದರು.
ಈಗಾಗಲೇ ಬೆಳಗಾವಿ, ಬೀದರ್, ಮೈಸೂರು, ರಾಮನಗರ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಇಂತಹ ಪ್ರಕರಣಗಳಲ್ಲಿ ಎಫ್‍ಐಆರ್ ದಾಖಲಾಗಿವೆ. ಇಂತಹ ಪ್ರಕರಣಗಳಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ಸಿಎಂ ಹಾಗೂ ಸಹಕಾರ ಸಚಿವರು ಸೂಚಿಸಿದ್ದಾರೆ. ಇದನ್ನು ನಿಯಂತ್ರಿಸಲು ಸುಗ್ರೀವಾಜ್ಞೆ ಸಿದ್ಧಪಡಿಸಲಾಗಿದ್ದು, ಒಂದೆರಡು ದಿನಗಳಲ್ಲಿ ರಾಜ್ಯಪಾಲರಿಗೆ ಕಳುಹಿಸಲಾಗುವುದು ಎಂದರು.
ಪ್ರತಿ ಜಿಲ್ಲಾ ಕಚೇರಿಯಲ್ಲಿ ಇಂತಹ ಕಿರುಕುಳ ಪ್ರಕರಣಗಳಿಗೆ ದೂರು ನೀಡಲು ಸಹಾಯವಾಣಿ ಆರಂಭಿಸಲಾಗಿದೆ. ಇಂತಹ ಪ್ರಕರಣಗಳು ಗಮನಕ್ಕೆ ಬಂದರೆ ಕೂಡಲೇ ಈ ಸಹಾಯವಾಣಿಗೆ ಸಂಪರ್ಕಿಸಿ, ಬಡವರಿಗೆ ನೆರವಾಗಬೇಕು ಎಂದು ಕಾಂಗ್ರೆಸ್ ಪಕ್ಷ ಹಾಗೂ ಇತರ ಪಕ್ಷಗಳ ಕಾರ್ಯಕರ್ತರಿಗೂ ಮನವಿ ಮಾಡುತ್ತೇನೆ. ಸಿಎಂ ತಮ್ಮ ವಿಶ್ರಾಂತಿ ಬಳಿಕ ಸಧ್ಯದಲ್ಲೇ ಪೊಲೀಸ್ ಅಧಿಕಾರಿಗಳು, ಆಯುಕ್ತರ ಜತೆ ಸಭೆ ನಡೆಸಲಿದ್ದಾರೆ. ನಂತರ ಜಿಲ್ಲಾಧಿಕಾರಿಗಳ ಜತೆ ಪ್ರತ್ಯೇಕ ಸಭೆ ನಡೆಸಲಿದ್ದಾರೆ ಎಂದು ಅವರು ತಿಳಿಸಿದರು.
ಕೊಡುಗೆಗಳ ಪಟ್ಟಿ ನೀಡಲಿ: ಕೇಂದ್ರ ಸರಕಾರ ಎಷ್ಟು ಲಕ್ಷ ಕೋಟಿ ರೂ.ಸಾಲ ಮಾಡಿದೆ ಎಂಬುದನ್ನು ಅರಿಯಬೇಕು. ನಮ್ಮ ರಾಜ್ಯ ಸರಕಾರ ಅಷ್ಟು ದೊಡ್ಡ ಪ್ರಮಾಣದ ಸಾಲ ಮಾಡಿಲ್ಲ. ನಾವು ಈ ಗ್ಯಾರಂಟಿ ಯೋಜನೆ ಘೋಷಣೆ ಮಾಡಿದಾಗ ಪ್ರಧಾನಿ ಮೋದಿ ನಮ್ಮ ರಾಜ್ಯ ದಿವಾಳಿಯಾಗಲಿದೆ ಎಂದು ಹೇಳಿದ್ದರು. ನಂತರ ನಡೆದ ಎಲ್ಲ್ಲ ರಾಜ್ಯಗಳ ಚುನಾವಣೆಯಲ್ಲಿ ಅವರು ಗ್ಯಾರಂಟಿ ಯೋಜನೆ ನಕಲು ಮಾಡಿ ಯೋಜನೆಗಳನ್ನು ಘೋಷಿಸಿದ್ದಾರೆ ಎಂದು ಟೀಕಿಸಿದರು.
ನಮ್ಮ ಸರಕಾರ ಬೆಲೆ ಏರಿಕೆ ಹಾಗೂ ನಿರುದ್ಯೋಗ ಸಮಸ್ಯೆಯಿಂದ ಬಳಲಿದ್ದ ಜನಸಾಮಾನ್ಯರಿಗೆ ನೆರವಾಗಲು ಗ್ಯಾರಂಟಿ ಯೋಜನೆ ಘೋಷಣೆ ಮಾಡಿದೆಯೇ ಹೊರತು, ಮತಕ್ಕಾಗಿ ಅಲ್ಲ. ನಮ್ಮ ಸರಕಾರದ ಆರ್ಥಿಕ ಪರಿಸ್ಥಿತಿ ಹಾಗೂ ದಿವಾಳಿ ವಿಚಾರ ಪಕ್ಕಕ್ಕಿರಲಿ. ಕೇಂದ್ರ ಸರಕಾರದ ಬಜೆಟ್‍ನಲ್ಲಿ ಕರ್ನಾಟಕಕ್ಕೆ ಅವರು ಯಾವ ಕೊಡುಗೆ ನೀಡಿದ್ದಾರೆಂದು ಮೊದಲು ಪಟ್ಟಿ ನೀಡಲಿ ಎಂದು ತಿರುಗೇಟು ನೀಡಿದರು.
ಯಾವ ಶಾಸಕರೂ ಸಂಪರ್ಕಿಸಿಲ್ಲ: ನಾನು ಜೆಡಿಎಸ್ ಶಾಸಕರ ವಿಚಾರವಾಗಿ ಮಾತನಾಡಿಲ್ಲ, ಜೆಡಿಎಸ್ ಕಾರ್ಯಕರ್ತರು ತಮ್ಮ ಭವಿಷ್ಯವನ್ನು ತಾವು ನೋಡಿಕೊಳ್ಳಬೇಕೆಂದು ಕರೆ ನೀಡಿದ್ದೇನೆ. ಆ ಕಾರ್ಯಕರ್ತರು ಎಷ್ಟು ದಿನ ಎಂದು ಕಾಯಲು ಸಾಧ್ಯ? ಅವರಿಗೂ ಜಾತ್ಯತೀತ ಸಿದ್ಧಾಂತದ ರಾಷ್ಟ್ರೀಯ ಪಕ್ಷದ ಅಗತ್ಯವಿದೆ. ಅನೇಕ ಕಾರ್ಯಕರ್ತರು ನಮ್ಮ ಪಕ್ಷ ಸೇರಲು ಮುಂದಾಗಿದ್ದಾರೆ ಎಂದು ತಿಳಿಸಿದರು.







