ಹೊಸ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಕುಸಿತ : ಡಿಸಿಎಂ ಡಿ.ಕೆ.ಶಿವಕುಮಾರ್

ಡಿ.ಕೆ.ಶಿವಕುಮಾರ್
ಬೆಂಗಳೂರು : ರಾಜ್ಯದ ವಿಶ್ವ ವಿದ್ಯಾನಿಲಯಗಳ ಕಾರ್ಯವೈಖರಿ ಹಾಗೂ ಆರ್ಥಿಕ ಸ್ಥಿತಿಗಳ ಅಧ್ಯಯನಕ್ಕೆ ಸಂಬಂಧಿಸಿದಂತೆ ರಚಿಸಲಾಗಿರುವ ಸಚಿವ ಸಂಪುಟ ಉಪ ಸಮಿತಿಯು ರಾಜ್ಯ, ವಿಶ್ವ ವಿದ್ಯಾಲಯ ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸೂಕ್ತ ತೀರ್ಮಾನ ಮಾಡಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಶುಕ್ರವಾರ ಸದಾಶಿವನಗರದಲ್ಲಿನ ತಮ್ಮ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರಕಾರದ ಅವಧಿಯಲ್ಲಿ 10 ಹೊಸ ವಿವಿಗಳನ್ನು ಆರಂಭಿಸಿದ್ದು, ಪ್ರತಿ ವಿವಿಗೆ ಕೇವಲ 2 ಕೋಟಿ ರೂಪಾಯಿ ಹಣ ಮೀಸಲಿಟ್ಟಿದ್ದರು. ಯಾವುದೇ ಜಮೀನು ನೀಡಿರಲಿಲ್ಲ ಎಂದು ಇದೇ ವೇಳೆ ದೂರಿದರು.
ಮಂಡ್ಯ, ಚಾಮರಾಜನಗರ ಭಾಗದಲ್ಲಿ ಎಲ್ಲರೂ ಮೈಸೂರು ವಿವಿಗೆ ಮೊದಲ ಆದ್ಯತೆ ನೀಡಿದ ಪರಿಣಾಮ ಇತರೇ ವಿವಿಗಳಲ್ಲಿ ಪ್ರವೇಶಾತಿ ಕುಸಿತವಾಗಿತ್ತು. ಈ ಬಗ್ಗೆ ಆಂತರಿಕ ವರದಿ ತಯಾರಿಸಿ ಸಿಎಂಗೆ ಸಲ್ಲಿಸಲಾಗಿತ್ತು. ಮುಖ್ಯಮಂತ್ರಿ ನನ್ನ ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿ ರಚಿಸಿದ್ದರು. ಈ ಬಗ್ಗೆ ನಾವು ಸಿಎಂಗೆ ಮಾಹಿತಿ ನೀಡಬೇಕು. ಮಾಹಿತಿ ನೀಡಲು ಆಗಿಲ್ಲ. ಮಾಹಿತಿ ನೀಡಿದ ನಂತರ ಸಂಪುಟ ಸಭೆಯಲ್ಲಿ ಚರ್ಚಿಸಿದ ಬಳಿಕ ಪ್ರತಿಕ್ರಿಯೆ ನೀಡುತ್ತೇನೆ ಎಂದು ಶಿವಕುಮಾರ್ ತಿಳಿಸಿದರು.
‘ಕೆಲ ವಿವಿಗಳನ್ನು ಮುಚ್ಚುತ್ತೀರಾ?’ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ನಿಮ್ಮ ಮಾತಿಗೆ ನಾನು ಕುಣಿಯಲು ಆಗುವುದಿಲ್ಲ. ನಿಮ್ಮ ಪ್ರಯತ್ನದಿಂದ ನನ್ನ ಬಾಯಲ್ಲಿ ಕೆಲವು ವಿಚಾರ ಬರುವುದಿಲ್ಲ. ಬೇರೆಯವರನ್ನು ನಿಭಾಯಿಸುವಂತೆ ನನ್ನನ್ನು ನಿಭಾಯಿಸಲು ಪ್ರಯತ್ನಿಸಬೇಡಿ. ರಾಜ್ಯ, ವಿವಿಗಳು ಹಾಗೂ ವಿದ್ಯಾರ್ಥಿಗಳ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ನಾವು ತೀರ್ಮಾನ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
‘ಹೊಸ ವಿವಿಗಳ ವಿಚಾರದಲ್ಲಿ ಯಾವುದೇ ವೈಯಕ್ತಿಕ ಉದ್ದೇಶವಿಲ್ಲ. ವಿದ್ಯಾರ್ಥಿಗಳ ಭವಿಷ್ಯವೇ ಮುಖ್ಯ. ಪ್ರಾಧ್ಯಾಪಕರು ಮಂಡ್ಯ, ಚಾಮರಾಜನಗರಕ್ಕೆ ಹೋಗಲು ತಯಾರಿಲ್ಲ. ಅವರು ತಮ್ಮ ಹಿರಿತನ ಹಾಗೂ ಪಿಂಚಣಿ ವ್ಯವಸ್ಥೆ ಗಮನದಲ್ಲಿಟ್ಟಕೊಂಡು ಹಿಂಜರಿಯುತ್ತಿದ್ದಾರೆ. ಈ ವಿಚಾರವಾಗಿ ಬಂದಿರುವ ಸಲಹೆಗಳನ್ನು ಚರ್ಚೆ ಮಾಡುತ್ತೇವೆ. ಸಂಪುಟ ಸಭೆಯಲ್ಲಿ ಚರ್ಚೆ ಮಾಡಿದ ಬಳಿಕ ನಿಮಗೆ ಮಾಹಿತಿ ನೀಡುತ್ತೇವೆ ಎಂದು ಅವರು ಹೇಳಿದರು.
ಹೊಸ ವಿವಿಗಳ ಮೇಲೆ ತೂಗುಗತ್ತಿ?: ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು, ಕೊಪ್ಪಳ, ಹಾವೇರಿ, ಬಾಗಲಕೋಟೆ, ಮಹಾರಾಣಿ ಕ್ಲಸ್ಟರ್ ಹಾಗೂ ನೃಪತುಂಗ ವಿಶ್ವ ವಿದ್ಯಾಲಯಗಳನ್ನು ಮುಚ್ಚುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.







