ʼನನ್ನ ನಾಯಕತ್ವದಲ್ಲೇ ಮುಂದಿನ ಚುನಾವಣೆ’ ಎಂಬ ಡಿಕೆಶಿ ಹೇಳಿಕೆಯಲ್ಲಿ ತಪ್ಪಿಲ್ಲ: ಜಿ.ಸಿ.ಚಂದ್ರಶೇಖರ್

ಬೆಂಗಳೂರು : ‘ನನ್ನ ನಾಯಕತ್ವದಲ್ಲೇ ಮುಂದಿನ ಚುನಾವಣೆ ನಡೆಯಲಿದೆ’ ಎಂಬ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್ ತಿಳಿಸಿದ್ದಾರೆ.
ಶುಕ್ರವಾರ ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಅವರು ತಮ್ಮ ನೇತೃತ್ವದಲ್ಲಿ ಚುನಾವಣೆಗೆ ಹೋಗೋಣ ಎಂದು ಹೇಳಿರುವುದರಲ್ಲಿ ತಪ್ಪಿಲ್ಲ ಎಂದರು.
ರಾಜ್ಯದಲ್ಲಿ ಪಕ್ಷಕ್ಕೆ ಸುಪ್ರೀಂ ಅಂದರೆ ಕೆಪಿಸಿಸಿ ಅಧ್ಯಕ್ಷರು. ಅವರು ಹೇಳುವುದು ತಪ್ಪಿಲ್ಲ. ಮುಂದಿನ ಚುನಾವಣೆ ಅಂದರೆ ಸ್ಥಳೀಯ ಸಂಸ್ಥೆ ಚುನಾವಣೆಗೆ ಹೇಳಿರಬೇಕು ಎಂದು ಜಿ.ಸಿ.ಚಂದ್ರಶೇಖರ್ ಸಮರ್ಥಿಸಿಕೊಂಡರು.
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನಾಯಕತ್ವ ನಮಗೆ ಶಾಶ್ವತವಾಗಿ ಬೇಕು. ಈ ದೃಷ್ಟಿಯಲ್ಲಿ ಡಿ.ಕೆ.ಶಿ. ಹೇಳಿರಬಹುದು. ಅವರು ಇನ್ನೂ 20-25 ವರ್ಷ ರಾಜಕೀಯ ಮಾಡುತ್ತಾರೆ ಎಂದು ಜಿ.ಸಿ.ಚಂದ್ರಶೇಖರ್ ಹೇಳಿದರು.
ಈಗ ಕಾಂಗ್ರೆಸ್‍ನಲ್ಲಿ ಎಲ್ಲವೂ ಸರಿ ಇದೆ. ಯಾವ ನಾಯಕರು ಮಾತನಾಡುತ್ತಿಲ್ಲ. ಆದರೆ, ಬಿಜೆಪಿಯಲ್ಲಿ ದೊಡ್ಡ ಗಲಾಟೆ ಇದೆ. ಮಾಧ್ಯಮಗಳು ಅದನ್ನು ತೋರಿಸಬೇಕು ಎಂದು ಜಿ.ಸಿ.ಚಂದ್ರಶೇಖರ್ ತಿಳಿಸಿದರು.







