‘ರಸ್ತೆ ಗುಂಡಿ ಮುಚ್ಚಿ, ಕಸದ ಸಮಸ್ಯೆ ಬಗೆಹರಿಸದಿದ್ದರೆ’ ವಿಧಾನಸೌಧಕ್ಕೆ ಮುತ್ತಿಗೆ ಖಚಿತ : ಆರ್.ಅಶೋಕ್ ಎಚ್ಚರಿಕೆ

ಆರ್.ಅಶೋಕ್
ಬೆಂಗಳೂರು : ಅಧಿಕಾರ ಸಿಕ್ಕ ತಕ್ಷಣ ಬರೀ ಕಮಿಷನ್, ವರ್ಗಾವಣೆ ದಂಧೆಯಲ್ಲಿ ಮುಳುಗಿರುವ ಈ ಸರಕಾರಕ್ಕೆ ಬೆಂಗಳೂರಿನ ‘ಬ್ರಾಂಡ್’ ಇಮೇಜ್ ಸಂಪೂರ್ಣವಾಗಿ ಮಣ್ಣುಪಾಲು ಮಾಡಲು ಹೊರಟಿದೆ. ತಕ್ಷಣವೇ ಯುದ್ಧೋಪಾದಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಿ, ಕಸದ ಸಮಸ್ಯೆಯನ್ನು ಬಗೆಹರಿಸದಿದ್ದರೆ, ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಹೋರಾಟ ಮಾಡುವುದು ಖಚಿತ’ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಬ್ರ್ಯಾಂಡ್ ಬೆಂಗಳೂರು' ಅಲ್ಲ, ಇದು ಡಿ.ಕೆ.ಶಿವಕುಮಾರ್ ಹಾಗೂ ಕೃಷ್ಣ ಬೈರೇಗೌಡರ ಜುಗಲ್ಬಂದಿಯ ‘ಬ್ರೋಕನ್ ಬೆಂಗಳೂರು'. ನಗರಕ್ಕೆ ಮುಂಗಾರು ಮಳೆ ಕಾಲಿಟ್ಟಿದ್ದೇ ತಡ, ಸಿಲಿಕಾನ್ ಸಿಟಿಯ ಅಸಲಿ ಬಣ್ಣ ಬಯಲಾಗಿದೆ. ಒಂದೆಡೆ ರಸ್ತೆ ತುಂಬಾ ಬಿದ್ದಿರುವ 5ಸಾವಿರಕ್ಕೂ ಅಧಿಕ ಮೃತ್ಯುಕೂಪಗಳು, ಇನ್ನೊಂದೆಡೆ ಕಣ್ಣು ಹಾಯಿಸಿದಲ್ಲೆಲ್ಲಾ ನಾರುತ್ತಿರುವ ಕಸದ ರಾಶಿ’ ಎಂದು ಲೇವಡಿ ಮಾಡಿದ್ದಾರೆ.
‘ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ, ಇಲಾಖೆಗಳ ಹಂಚಿಕೆಯ ಜಿದ್ದಾಜಿದ್ದಿನಲ್ಲಿ ಕೊನೆಗೂ ಒಲ್ಲದ ಮನಸ್ಸಿನಿಂದ ಸಚಿವ ಕೃಷ್ಣಬೈರೇಗೌಡ ಅವರಿಗೆ ಬೆಂಗಳೂರಿನ ಜವಾಬ್ದಾರಿ ಕಟ್ಟಿದ್ದೀರಿ. ಆದರೆ, ಕಂದಾಯ ಇಲಾಖೆಯನ್ನು ಬಿಡಲು ಮನಸಿಲ್ಲದ ಸಚಿವ ಕೃಷ್ಣ ಬೈರೇಗೌಡರಿಗೆ ಬೆಂಗಳೂರಿನ ನಗರದ ಜನರ ಜೀವಕ್ಕಿಂತ, ಬಿಡಿಎ, ಬಿಎಂಆರ್ಡಿಎ ಇಲ್ಲದ ‘ನೀರಸ’ ಬೆಂಗಳೂರು ಅಭಿವೃದ್ಧಿ ಖಾತೆಯ ಮೇಲಿನ ಅಸಮಾಧಾನವೇ ದೊಡ್ಡದಾದಂತಿದೆ’ ಎಂದು ಅಶೋಕ್ ಗಮನ ಸೆಳೆದಿದ್ದಾರೆ.
5ಸಾವಿರಕ್ಕೂ ಹೆಚ್ಚು ರಸ್ತೆ ಗುಂಡಿಗಳು: ಮಳೆಗಾಲ ಶುರುವಾದರೂ ಕೇವಲ ಶೇ.20ರಷ್ಟು ಕಾಮಗಾರಿ ಮಾತ್ರ ಪೂರ್ಣಗೊಂಡಿದೆ. ಬಾಕಿ ಶೇ.80ರಷ್ಟು ಕಾಮಗಾರಿ ಇನ್ನೂ ನೆನೆಗುದಿಗೆ ಬಿದ್ದಿದೆ. ಬೈಕ್ ಸವಾರರು ರಸ್ತೆಗೆ ಇಳಿದರೆ ಜೀವ ಕೈಯಲ್ಲಿ ಹಿಡಿದು ಓಡಾಡಬೇಕಾಗಿದೆ. ಈ ಗುಂಡಿಗಳಿಗೆ ಬೀಳುವ ಬಡವರ ಜೀವಕ್ಕೆ ಯಾರು ಹೊಣೆ? ಎಂದು ಅವರು ಪ್ರಶ್ನಿಸಿದ್ದಾರೆ.
‘ಕಂಡ ಕಂಡಲ್ಲಿ ಕಸದ ರಾಶಿ ಬಿದ್ದಿದೆ, ವಿಲೇವಾರಿ ಮಾಡಲು ಜಿಬಿಎಗೆ ಯೋಗ್ಯತೆಯಿಲ್ಲ. ಮಳೆ ನೀರಿಗೆ ಈ ಕಸ ಕೊಳೆತು ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಸ್ವಚ್ಛಗೊಳಿಸಬೇಕಾದ ಸಿಬ್ಬಂದಿಯೇ ಕಸವನ್ನು ರಸ್ತೆ ಮಧ್ಯೆ ಸುರಿಯುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗುತ್ತಿದ್ದರೂ ಇಲಾಖೆ ಕುರುಡಾಗಿದೆಯೇ?’ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
‘ಮುಂಜಾಗ್ರತೆಯಿಲ್ಲದೆ ವಿಟ್ಟಸಂದ್ರದಲ್ಲಿ ಕಸ ವರ್ಗಾವಣೆ ಕೇಂದ್ರ ಸ್ಥಾಪಿಸಲು ಮುಂದಾಗಿ ಸ್ಥಳೀಯ ಜನರನ್ನು ನರಕಕೂಪಕ್ಕೆ ತಳ್ಳಲಾಗುತ್ತಿದೆ. ಮುಖ್ಯಮಂತ್ರಿಗಳೇ, ಬೆಂಗಳೂರಿಗೆ 2ಸಾವಿರ ಕೋಟಿ ರೂ. ಬಿಡುಗಡೆ ಮಾಡಿದ್ದೇವೆ ಎಂದು ಕೊಚ್ಚಿಕೊಳ್ಳುತ್ತಿದ್ದೀರಲ್ಲ, ಆ ಹಣ ಯಾರ ಜೇಬು ಸೇರಿದೆ?, ರಸ್ತೆಗಳೇಕೆ ಇನ್ನೂ ಮೃತ್ಯು ಕೂಪಗಳಾಗಿಯೇ ಉಳಿದಿವೆ?. ಸಚಿವ ಕೃಷ್ಣ ಬೈರೇಗೌಡರೇ.. ನಿಮಗೆ ಇಷ್ಟವಿಲ್ಲದಿದ್ದರೆ ಖಾತೆ ಬಿಟ್ಟು ರಾಜೀನಾಮೆ ಕೊಡಿ, ಅದನ್ನು ಬಿಟ್ಟು ಬೆಂಗಳೂರಿನ ನಾಗರಿಕರನ್ನು ನಿಮ್ಮ ಅಸಮಾಧಾನಕ್ಕೆ ಬಲಿ ಕೊಡಬೇಡಿ’ ಎಂದು ಅಶೋಕ್ ಸಲಹೆ ನೀಡಿದ್ದಾರೆ.
'ಬ್ರ್ಯಾಂಡ್ ಬೆಂಗಳೂರು' ಅಲ್ಲ, ಇದು ಡಿ.ಕೆ.ಶಿವಕುಮಾರ್ ಹಾಗೂ ಕೃಷ್ಣ ಬೈರೇಗೌಡರ ಜುಗಲ್ಬಂದಿಯ "ಬ್ರೋಕನ್ ಬೆಂಗಳೂರು'!**
— R. Ashoka (@RAshokaBJP) June 9, 2026
ನಗರಕ್ಕೆ ಮುಂಗಾರು ಮಳೆ ಕಾಲಿಟ್ಟಿದ್ದೇ ತಡ, ಸಿಲಿಕಾನ್ ಸಿಟಿಯ ಅಸಲಿ ಬಣ್ಣ ಬಯಲಾಗಿದೆ. ಒಂದೆಡೆ ರಸ್ತೆ ತುಂಬಾ ಬಿದ್ದಿರುವ 5,000ಕ್ಕೂ ಅಧಿಕ ಮೃತ್ಯುಕೂಪಗಳು, ಇನ್ನೊಂದೆಡೆ ಕಣ್ಣು ಹಾಯಿಸಿದಲ್ಲೆಲ್ಲಾ ನಾರುತ್ತಿರುವ… pic.twitter.com/C24JKhncvS






