ಯಶವಂತಪುರದಲ್ಲಿ ಟೆಕ್ಸ್‌ಟೈಲ್ ಮಾರುಕಟ್ಟೆ; ಸಿಎಂ ಜೊತೆ ಚರ್ಚಿಸಿ ಶೀಘ್ರ ಶಂಕು ಸ್ಥಾಪನೆ : ಶಿವಾನಂದ ಪಾಟೀಲ್

ಬೆಂಗಳೂರು : ‘ಪಾರಂಪರಿಕ ಕಲೆಯನ್ನು ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ನಮ್ಮ ಉತ್ಪನ್ನಗಳಿಗೆ ಸ್ಥಳೀಯವಾಗಿಯೇ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಯಶವಂತಪುರದಲ್ಲಿರುವ ಇಲಾಖೆಯ ಒಂದೂವರೆ ಎಕರೆ ಪ್ರದೇಶದಲ್ಲಿ ಕಟ್ಟಡ ನಿರ್ಮಿಸಲಾಗುವುದು’ ಎಂದು ಜವಳಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ.
ಶನಿವಾರ ಇಲ್ಲಿನ ರಾಜಾಜಿನಗರದ ಡಾ.ಅಂಬೇಡ್ಕರ್ ಕ್ರೀಡಾಂಗಣನಲ್ಲಿ 14 ದಿನಗಳ ಭಾರತೀಯ ಕೈಮಗ್ಗ ಪರಂಪರೆ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರೊಂದಿಗೆ ಜೊತೆ ಚರ್ಚಿಸಿ ಶೀಘ್ರದಲ್ಲಿ ಶಂಕುಸ್ಥಾಪನೆ ನೆರವೇರಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಪಾರಂಪರಿಕ ಕಲೆ ನಶಿಸಿ ಹೋಗುತ್ತಿದೆ. ಈ ಕಲೆಯನ್ನು ಉಳಿಸಿ-ಬೆಳೆಸಲು ಉತ್ಪನ್ನಗಳಿಗೆ ಸ್ಥಳೀಯ ಮಾರುಕಟ್ಟೆ ಕಲ್ಪಿಸಬೇಕಾಗಿದೆ. ಯಶವಂತಪುರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕಟ್ಟಡದಲ್ಲಿ ಕೈಮಗ್ಗ ಉತ್ಪನ್ನಗಳು, ಚನ್ನಪಟ್ಟಣದ ಗೊಂಬೆ, ಕುಂಬಾರಿಕೆ ಸೇರಿದಂತೆ ಎಲ್ಲ ರೀತಿಯ ಪಾರಂಪರಿಕ ಕಲೆಯ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲು ಯೋಜಿಸಲಾಗಿದೆ ಎಂದು ಅವರು ಹೇಳಿದರು.
ರಾಜ್ಯದ ಕೈಮಗ್ಗ ಉತ್ಪನ್ನಗಳು ಹೊರ ರಾಜ್ಯಗಳಲ್ಲಿ ಬೇರೆ ಬೇರೆ ಬ್ರಾಂಡ್‍ಗಳಲ್ಲಿ ಮಾರಾಟವಾಗುತ್ತಿವೆ. ನಮ್ಮದೇ ಉತ್ಪನ್ನಗಳು ಬೇರೆ ರಾಜ್ಯಗಳಿಂದ ಬೇರೆ ಬ್ರಾಂಡ್‍ಗಳ ರೂಪದಲ್ಲಿ ರಾಜ್ಯಕ್ಕೆ ಬರುತ್ತಿವೆ. ಸ್ಥಳೀಯವಾಗಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದರೆ ಈ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕೈಮಗ್ಗ ಕೇವಲ ಉತ್ಪಾದನಾ ಕ್ಷೇತ್ರವಷ್ಟೇ ಅಲ್ಲ, ಅದು ಭಾರತದ ಸಾಂಸ್ಕೃತಿ ಕ ಗುರುತು. ಕೈಗಾರಿಕೆ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುವ ಜೀವಂತ ಸಂಪ್ರದಾಯ. ನಮ್ಮ ನೇಕಾರರು ಪೀಳಿಗೆಯಿಂದ ಪೀಳಿಗೆಗೆ ತಂತ್ರಜ್ಞಾನ ಹಾಗೂ ವಿನ್ಯಾಸವನ್ನು ಸಂರಕ್ಷಣೆ ಮಾಡಿಕೊಂಡು ಬಂದಿದ್ದು, ಅದರ ಫಲವಾಗಿ ಭಾರತೀಯ ಕೈಮಗ್ಗ ಉತ್ಪನ್ನಗಳು ವಿಶ್ವದಾದ್ಯತ ಪ್ರಶಂಸೆಗೆ ಪಾತ್ರವಾಗಿವೆ ಎಂದು ಅವರು ನುಡಿದರು.
ಕಾವೇರಿ ಹ್ಯಾಂಡ್ ಲೂಮ್ ಅಧ್ಯಕ್ಷ ಬಿ.ಜೆ.ಗಣೇಶ್ ಅವರು ಕೈಮಗ್ಗ ಉತ್ಪನ್ನಗಳು ಸೇರಿ ಸಾಂಪ್ರದಾಯಿಕ ಕಲೆಯ ಎಲ್ಲ ಉತ್ಪನ್ನಗಳು ಒಂದೇ ಸೂರಿನಡಿ ಸಿಗುವಂತೆ ಮಾರುಕಟ್ಟೆ ಕಲ್ಪಿಸಬೇಕು ಎಂದು ಸಚಿವ ಶಿವಾನಂದ ಪಾಟೀಲ್‍ಗೆ ಮನವಿ ಮಾಡಿದರು. ಈ ವೇಳೆ ಜವಳಿ ಇಲಾಖೆ ಅಧಿಕಾರಿಗಳಾದ ಪ್ರಭಾ ಕರಣ್, ಪ್ರಕಾಶ್, ಯೋಗೇಶ್ ಉಪಸ್ಥಿತರಿದ್ದರು.






