ಮಂಡ್ಯ, ಹಾಸನ, ಚಾಮರಾಜನಗರ ಜಿಲ್ಲೆಗಳ ರಸ್ತೆ ಅಭಿವೃದ್ಧಿಗೆ 150 ಕೋಟಿ ರೂ. ಬಿಡುಗಡೆ : ಸಚಿವ ರಹೀಂ ಖಾನ್

ರಹೀಂ ಖಾನ್
ಬೆಳಗಾವಿ(ಸುವರ್ಣ ವಿಧಾನಸೌಧ), ಡಿ.9: ಮಂಡ್ಯ, ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳ ಪೌರಾಡಳಿತ ಪ್ರದೇಶಗಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ವಿವಿಧ ಯೋಜನೆಗಳಡಿಯಲ್ಲಿ 2023 ಸಾಲಿನಿಂದ ಇಲ್ಲಿಯವರೆಗೆ 150.08 ಕೋಟಿ ರೂ. ಬಿಡುಗಡೆಯಾಗಿದ್ದು, 142.32 ಕೋಟಿ ರೂ. ವೆಚ್ಚವಾಗಿದೆ ಎಂದು ಪೌರಾಡಳಿತ ಸಚಿವ ರಹೀಂ ಖಾನ್ ತಿಳಿಸಿದ್ದಾರೆ.
ಮಂಗಳವಾರ ವಿಧಾನ ಪರಿಷತ್ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಕೆ.ವಿವೇಕಾನಂದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹಾಸನ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 3.3 ಕಿ.ಮೀ. ರಸ್ತೆಗಳು ಅಧಿಕ ಮಳೆಯಿಂದ ಹಾಳಾಗಿದ್ದು, ಈ ರಸ್ತೆಗಳನ್ನು ದುರಸ್ಥಿಪಡಿಸಲು 3.30 ಕೋಟಿ ರೂ.ಗಳ ಮೊತ್ತಕ್ಕೆ ಅಂದಾಜು ಸಿದ್ಧಪಡಿಸಲಾಗಿದೆ. 15ನೇ ಹಣಕಾಸು ಆಯೋಗದ ಅನುದಾನ, ಎಸ್.ಎಫ್.ಸಿ. ಅನುದಾನ ಹಾಗೂ ಸ್ಥಳೀಯ ಸಂಸ್ಥೆ ನಿಧಿಗಳಡಿ ಲಭ್ಯವಿರುವ ಅನುದಾನದಲ್ಲಿ ಸದರಿ ರಸ್ತೆಗಳನ್ನು ದುರಸ್ಥಿಪಡಿಸಲಾಗುತ್ತಿದೆ ಎಂದರು.
ಚಾಮರಾಜನಗರ ನಗರಸಭೆಯ ವ್ಯಾಪ್ತಿಯಲ್ಲಿ 13 ಕಿ.ಮೀ. ರಸ್ತೆ ದುರಸ್ತಿ ಕಾಮಗಾರಿಯನ್ನು 15ನೇ ಹಣಕಾಸು ಆಯೋಗದ ಅನುದಾನ, ಎಸ್.ಎಫ್.ಸಿ. ಅನುದಾನ ಹಾಗೂ ಸ್ಥಳೀಯ ಸಂಸ್ಥೆ ನಿಧಿಗಳಡಿ ಲಭ್ಯವಿರುವ ಒಟ್ಟು ಮೊತ್ತ 2.77 ಕೋಟಿ ರೂ.ಗಳಲ್ಲಿ ಕೈಗೊಳ್ಳಲಾಗುತ್ತಿದೆ. ಮಂಡ್ಯ ನಗರಸಭೆ ವ್ಯಾಪ್ತಿಯಲ್ಲಿ 9 ಕಿ.ಮೀ. ರಸ್ತೆ, ದುರಸ್ತಿ ಕಾಮಗಾರಿಯನ್ನು ಸ್ಥಳೀಯ ಸಂಸ್ಥೆ ನಿಧಿಯಡಿ ಲಭ್ಯವಿರುವ 50 ಲಕ್ಷ ರೂ.ಗಳಲ್ಲಿ ಕೈಗೊಳ್ಳಲಾಗುತ್ತಿದೆ ಎಂದು ರಹೀಂ ಖಾನ್ ಹೇಳಿದರು.





