ಬೆಂಗಳೂರು | ಗೀಸರ್ ನಿಂದ ಅನಿಲ ಸೋರಿಕೆಯಾಗಿ ತಾಯಿ, ಮಗು ಮೃತ್ಯು

ಸಾಂದರ್ಭಿಕ ಚಿತ್ರ (AI)
ಬೆಂಗಳೂರು: ಗೀಸರ್ ನಿಂದ ಅನಿಲ ಸೋರಿಕೆಯಾಗಿ ತಾಯಿ-ಮಗು ಮೃತಪಟ್ಟಿರುವ ಘಟನೆ ಗೋವಿಂದರಾಜನಗರದ ಪಂಚಶೀಲನಗರದಲ್ಲಿ ನಡೆದಿದೆ. ಪಂಚಶೀಲನಗರದ ನಿವಾಸಿ ಕಿರಣ್ ಅವರ ಪತ್ನಿ ಚಾಂದಿನಿ(30) ಹಾಗೂ ಪುತ್ರಿ ಯುವಿ (4) ಮೃತರು.
ಸೋಮವಾರ ಬೆಳಗ್ಗೆ ಎಂದಿನಂತೆ ಕಿರಣ್ ಕೆಲಸಕ್ಕೆ ಹೋಗಿ, ಹಿಂತಿರುಗಿ ಬಂದಾಗ ಬಾಗಿಲು ಮುಚ್ಚಿತ್ತು. ಬಾಗಿಲು ಹೊಡೆದು ಒಳಹೋಗಿ ನೋಡಿದಾಗ ತಾಯಿ-ಮಗಳು ಇಬ್ಬರು ಸ್ನಾನದ ಕೋಣೆಯಲ್ಲಿ ಅಸ್ವಸ್ಥರಾಗಿ ಬಿದ್ದಿರುವುದು ಕಂಡು ಬಂದಿದೆ. ಇಬ್ಬರನ್ನೂ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈ ವೇಳೆ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಮೃತಪಟ್ಟಿದ್ದಾರೆ.
ಇಬ್ಬರ ಮೃತದೇಹ ಮರಣೋತ್ತರ ಪರೀಕ್ಷೆ ನಡೆಸಿ ಮಂಗಳವಾರ ಕುಟುಂಬ ಸದಸ್ಯರಿಗೆ ಮೃತದೇಹ ಹಸ್ತಾಂತರಿಸಲಾಗಿದೆ. ಈ ಕುರಿತು ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





