ಸುಪ್ರೀಂ ಕೋರ್ಟ್ ನ ನಕಲಿ ಆದೇಶ ಪತ್ರ ಬಳಸಿ ಜೀವಾವಧಿ ಶಿಕ್ಷಿತನ ಬಿಡುಗಡೆ; ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆದ ಘಟನೆ ಎಂಟು ವರ್ಷಗಳ ಬಳಿಕ ಬೆಳಕಿಗೆ!

ಬೆಂಗಳೂರು: ಸುಪ್ರೀಂ ಕೋರ್ಟ್‌ನ ನಕಲಿ ಆದೇಶ ಪತ್ರವನ್ನು ಸಲ್ಲಿಸಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಖೈದಿಯೊಬ್ಬ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿದ್ದ ಪ್ರಕರಣ ಎಂಟು ವರ್ಷಗಳ ಬಳಿಕ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಶಂಕರ್ ಎ. ಎಂಬಾತ 2001ರಲ್ಲಿ ನಡೆದ ಅಪಹರಣ ಮತ್ತು ಸುಲಿಗೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ. ಆತ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ವೇಳೆ, ಸುಪ್ರೀಂ ಕೋರ್ಟ್ ಆದೇಶದ ನಕಲಿ ಪ್ರತಿಯನ್ನು ಜೈಲು ಅಧಿಕಾರಿಗಳಿಗೆ ಸಲ್ಲಿಸಿ 2018ರ ನವೆಂಬರ್ 13ರಂದು ಬಿಡುಗಡೆಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಬಿಡುಗಡೆಯ ಸಮಯದಲ್ಲಿ ಆತ 10 ಸಾವಿರ ರೂಪಾಯಿ ದಂಡವನ್ನೂ ಪಾವತಿಸಿದ್ದಾನೆ ಎನ್ನಲಾಗಿದೆ.
ಈ ಕುರಿತು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಮೇ 20ರಂದು ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಎಫ್‌ಐಆರ್ ಪ್ರಕಾರ, ನಕಲಿ ನ್ಯಾಯಾಲಯದ ಆದೇಶ ಬಳಸಿ ಖೈದಿಯೊಬ್ಬ ಬಿಡುಗಡೆಯಾಗಿದ್ದಾನೆ ಎಂಬ ಮಾಹಿತಿ ಬಂದೀಖಾನೆ ಮತ್ತು ತಿದ್ದುಪಡಿ ಸೇವೆಗಳ ಮಹಾ ನಿರ್ದೇಶಕರಿಗೆ ಲಭಿಸಿತ್ತು. ನಂತರ ನಡೆಸಿದ ಆಂತರಿಕ ತನಿಖೆಯಲ್ಲಿ ಆರೋಪ ಸತ್ಯವಾಗಿರುವುದು ಗೊತ್ತಾಗಿದೆ ಎಂದು ಹೇಳಲಾಗಿದೆ.
ಆರೋಪಿಯ ಬಿಡುಗಡೆಗೆ ಆಗಿನ ಜೈಲು ಅಧಿಕಾರಿಗಳ ಕರ್ತವ್ಯ ಲೋಪವೂ ಕಾರಣವಾಗಿರಬಹುದೆಂಬ ಅನುಮಾನ ವ್ಯಕ್ತವಾಗಿದೆ. ನ್ಯಾಯಾಲಯದ ಆದೇಶದ ನೈಜತೆಯನ್ನು ಪರಿಶೀಲಿಸದೆ ಹಾಗೂ ಅಗತ್ಯ ವಿಧಿವಿಧಾನಗಳನ್ನು ಪಾಲಿಸದೆ ಖೈದಿಯನ್ನು ಬಿಡುಗಡೆ ಮಾಡಲಾಗಿದೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಜೈಲು ಅಧಿಕಾರಿಗಳ ಪಾತ್ರ ಮತ್ತು ಕರ್ತವ್ಯ ಲೋಪದ ಕುರಿತೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.






