ಬೀದರ್ | ಸೆ.13 ರಂದು ಜಿಲ್ಲೆಯಲ್ಲಿ ಬೃಹತ್ ರಾಷ್ಟ್ರೀಯ ಲೋಕ ಆದಾಲತ್ : ನ್ಯಾ.ಪ್ರಕಾಶ್ ಬನಸೋಡೆ

ಬೀದರ್ : ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಸೆ.13 ರಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಬೃಹತ್ ಲೋಕ ಅದಾಲತ್‍ನ್ನು ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಕಾಶ್ ಅರ್ಜುನ್ ಬನಸೋಡೆ ಅವರು ತಿಳಿಸಿದರು.
ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಭಾಂಗಣದಲ್ಲಿ ಬೃಹತ್ ಲೋಕ ಅದಾಲತ್‍ನ ಪೂರ್ವಸಿದ್ಧತೆ ಕುರಿತು ಪತ್ರಿಕಾಗೋಷ್ಠಿ ನಡೆಸಿದ ಅವರು ಮಾತನಾಡಿದರು.
ಪ್ರಸ್ತುತ ಚಾಲ್ತಿಯಲ್ಲಿರುವ ಆಸ್ತಿಪಾಲು ವಿಭಾಗ ಜೀವನಾಂಶ, ಚೆಕ್ ಬೌನ್ಸ್, ವಿದ್ಯುತ್, ಕಂದಾಯ ಅಪರಾಧಿಕ, ಕಾರ್ಮಿಕರ, ಬ್ಯಾಂಕ್ ಹಾಗೂ ವ್ಯಾಜ್ಯ ಪೂರ್ವಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಮಾಡಲು ಅವಕಾಶ ಇರುತ್ತದೆ ಎಂದರು.
ಈ ಹಿಂದೆ ಜು.12 ರಂದು ನಡೆದ ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ಜಿಲ್ಲೆಯಾದ್ಯಾಂತ ಒಟ್ಟು 52,812 ಪ್ರಕರಣಗಳು ಇತ್ಯರ್ಥಗೊಳಿಸಲಾಗಿದ್ದು, ಇದರಲ್ಲಿ 10,697 ಪೆಂಡಿಂಗ್ ಹಾಗೂ 70,811 ವ್ಯಾಜ್ಯಪೂರ್ವ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿತ್ತು. ಈ ಬಾರಿಯ ಲೋಕ ಅದಾಲತ್ ನಲ್ಲಿ ನ್ಯಾಯಾಲಯದಲ್ಲಿ ಬಾಕಿ (ಪೆಂಡಿಂಗ್) ಇರುವ ಪ್ರಕರಣಗಳು ಹೆಚ್ಚಾಗಿ ಇತ್ಯರ್ಥಗೊಳಿಸಲು ಯೋಜನೆ ರೂಪಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 29,327 ಪ್ರಕರಣಗಳು ಪೆಂಡಿಂಗ್ ಇವೆ. ಇದರಲ್ಲಿ ಹೆಚ್ಚು ಪ್ರಕರಣಗಳು ರಾಜಿ ಮಾಡುವ ಗುರಿ ಹೊಂದಿದ್ದು, ಎಲ್ಲಾ ಪೂರ್ವ ತಯಾರಿ ಮಾಡಿಕೊಂಡಿದ್ದೇವೆ ಎಂದು ಮಾಹಿತಿ ಅವರು ನೀಡಿದ್ದಾರೆ.
ಪ್ರಕರಣದಲ್ಲಿ ರಾಜಿ ಮಾಡಿಕೊಳ್ಳುವುದರಿಂದ ಕಕ್ಷಿದಾರನಿಗೆ ನ್ಯಾಯಲಯ ಶುಲ್ಕ ವಾಪಸ್ ಸಿಗಲಿದೆ. ಮೇಲ್ಮನವಿ ಮಾಡಲು ಅವಕಾಶ ಇರುವುದಿಲ್ಲ. ಇಬ್ಬರೂ ಪಕ್ಷಗಾರರು ತಮ್ಮ ದ್ವೇಷ ಮರೆತು ಸುಮಧುರ ಬಾಂಧವ್ಯ ಹೊಂದುವ ಅವಕಾಶ ಇರುತ್ತದೆ. ಹಾಗೆಯೇ ಯಾವುದೇ ಖರ್ಚು ವೆಚ್ಚ ಇಲ್ಲದೇ ಶೀಘ್ರವಾಗಿ ಪ್ರಕರಣಗಳು ಇತ್ಯರ್ಥವಾಗುತ್ತವೆ ಎಂದು ಅವರು ತಿಳಿಸಿದರು.







