ಬೀದರ್ | ಶಾಂತಿ, ಸೌಹಾರ್ದಯುತವಾಗಿ ಗಣೇಶ ಹಬ್ಬ, ಈದ್ ಮಿಲಾದ್ ಹಬ್ಬ ಆಚರಿಸಬೇಕು : ಎಸ್ಪಿ ಪ್ರದೀಪ್ ಗುಂಟಿ

ಬೀದರ್ : ಜಿಲ್ಲೆಯಲ್ಲಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬವನ್ನು ಶಾಂತಿ ಹಾಗೂ ಸೌಹಾರ್ದಯುತವಾಗಿ ಆಚರಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ತಿಳಿಸಿದರು.
ಇಂದು ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ನಡೆದ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬ ಆಚರಣೆ ಹಿನ್ನೆಲೆಯಲ್ಲಿ ಸೌಹಾರ್ದತೆ ಸಭೆ ನಡೆಸಿ ಅವರು ಮಾತನಾಡಿದರು.
ದೇಶದಲ್ಲಿ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಗಣೇಶ ಹಬ್ಬ ಆಚರಿಸುತ್ತಾರೆ. ನಮ್ಮ ಜಿಲ್ಲೆಯಲ್ಲಿ ಕೂಡ ಬಹಳ ಸಂಭ್ರಮ, ಸಡಗರ, ಸೌಹಾರ್ದತೆಯಿಂದ ಗಣೇಶ ಹಬ್ಬ ಆಚರಣೆ ಮಾಡಲಾಗುತ್ತದೆ. ಜಿಲ್ಲೆಯಲ್ಲಿ ಹಬ್ಬದ ಪ್ರಯುಕ್ತ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದು ತಮ್ಮ ಮೊದಲ ಆದ್ಯತೆಯಾಗಿದೆ. ನಾವೆಲ್ಲರೂ ಗಣೇಶ ಹಬ್ಬವನ್ನು ಅದ್ದೂರಿಯಾಗಿ, ಶಾಂತಿಯುತವಾಗಿ ಹಾಗೂ ಸೌಹಾರ್ದತೆಯಿಂದ ಆಚರಿಸೋಣ. ತಮ್ಮ ಇಲಾಖೆ ಯಾವಾಗಲೂ ಸಾರ್ವಜನಿಕರ ಸಹಾಯಕ್ಕೆ ಇರುತ್ತದೆ. ಸಾರ್ವಜನಿಕರು ಕೂಡ ತಮ್ಮ ನಿರ್ದೇಶನಗಳು ಪಾಲನೆ ಮಾಡಬೇಕು ಎಂದರು.
ಹೆಚ್ಚು ಶಬ್ದ ಹೊಂದಿರುವ ಡಿಜೆ ಬಳಸಕೂಡದು. ಸಮಯ ಪಾಲನೆ ಕಟ್ಟು ನಿಟ್ಟಾಗಿ ಪಾಲಿಸಬೇಕು. ಪೋಲಿಸ್ ಇಲಾಖೆಯ 31 ಮಾರ್ಗ ಸೂಚಿಗಳು ಕಟ್ಟು ನಿಟ್ಟಾಗಿ ಪಾಲಿಸಬೇಕು. ಹಬ್ಬದ ನಿಮಿತ್ತವಾಗಿ ಧ್ವನಿ ವರ್ಧಕವನ್ನು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಮಾತ್ರ ಹಚ್ಚಬೇಕು. ವಿಸರ್ಜನೆ ದಿವಸ ಸಮಯ ಪಾಲನೆ ಬಹಳ ಮುಖ್ಯವಾಗಿದೆ. ಹಿಂದಿನ ವರ್ಷ ಆಗಿರುವ ತಪ್ಪುಗಳು ಈ ವರ್ಷ ಆಗದಂತೆ ನೋಡಿಕೊಳ್ಳಬೇಕು. ವಿಸರ್ಜನೆಯ ಮೆರವಣಿಗೆ ವೇಳೆ ಆಂಬುಲೆನ್ಸ್ , ಅಗ್ನಿಶಾಮಕ ಮತ್ತು ಇತರೆ ತುರ್ತು ವಾಹನಗಳಿಗೆ ದಾರಿ ಮಾಡಿಕೊಡಬೇಕು ಎಂದು ಸೂಚಿಸಿದರು.
ಪ್ರತಿಯೊಬ್ಬರ ಜೀವ ನಮಗೆ ಮಹತ್ವದಾಗಿದೆ. ಎಲ್ಲರನ್ನೂ ರಕ್ಷಣೆ ನೀಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ ಹಾಗೆಯೇ ಅಧಿಕಾರಿಗಳು ನೀಡುವ ಮಾರ್ಗ ಸೂಚಿಗಳು ಪಾಲನೆ ಮಾಡುವುದು ಸಾರ್ವಜನಿಕರ ಕರ್ತವ್ಯವಾಗಿದೆ ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷ ಮಹಮ್ಮದ್ ಗೌಸ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಹವಾಮಾನದ ವೈಪರೀತ್ಯ ಕಾಣುತ್ತಿದ್ದೇವೆ. ನಗರದಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು. ಎಲ್ಲರೂ ಒಂದಾಗಿ ಹಬ್ಬಗಳನ್ನು ಆಚಾರಿಸೋಣ ಎಂದು ನುಡಿದರು.
ಗಣೇಶ ಮಂಡಳಿಯ ಅಧ್ಯಕ್ಷ ಚಂದ್ರಶೇಖರ್ ಪಾಟೀಲ್ ಗಾದಗಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ್ ಕರಾಳೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ್ ಪುಜಾರಿ, ಅರಣ್ಯ ಇಲಾಖೆ ಉಪ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ, ಡಿವೈಎಸ್ಪಿ ಶಿವನಗೌಡ ಪಾಟೀಲ್, ಗಣೇಶ ಮಂಡಳಿಯ ಕಾರ್ಯಾಧ್ಯಕ್ಷ ಬಾಬು ವಾಲಿ, ಶಾಹೀನ್ ಪಟೇಲ್, ಶಶಿ ಹೊಸಳ್ಳಿ, ನಂದಕುಮಾರ್ ವರ್ಮಾ, ಮುನ್ನಾ ಕೌನ್ಸಲರ್ ಹಾಗೂ ನಿಜಾಮುದ್ದೀನ್ ಸೇರಿದಂತೆ ಎಲ್ಲಾ ಧರ್ಮಗಳ ಮುಖಂಡರು ಉಪಸ್ಥಿತರಿದ್ದರು.







