ಬೀದರ್ | 14 ಲಕ್ಷ ರೂ. ಗೂ ಅಧಿಕ ಮೌಲ್ಯದ ಗಾಂಜಾ ವಶ : ಆರೋಪಿಯ ಬಂಧನ

ಬೀದರ್ : ಗಾಂಜಾ ಮಾರಾಟ ಮಾಡಲು ಸಾಗಿಸುತ್ತಿದ್ದ 14 ಲಕ್ಷ ರೂ. ಗೂ ಅಧಿಕ ಮೌಲ್ಯದ ಗಾಂಜಾ ಮತ್ತು ಒಂದು ಬೈಕ್ ವಶಕ್ಕೆ ಪಡೆದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸಂತಪೂರ ಪೊಲೀಸ್ ಠಾಣಾ ವ್ಯಾಪ್ತಿಯ ವಡಗಾಂವ್ (ದೆ), ಜಂಬಗಿ (ಬಿ) ಗ್ರಾಮದಿಂದ ಸೊರಳ್ಳಿ ಮಾರ್ಗವಾಗಿ ಗಾಂಜಾ ಮಾರಾಟ ಮಾಡಲು ಬೀದರ್ ನಗರಕ್ಕೆ ಆರೋಪಿ ದ್ವಿಚಕ್ರ ವಾಹನದ ಮೂಲಕ ಗಾಂಜಾ ಸಾಗಾಟ ಮಾಡುತ್ತಿದ್ದ ಮಾಹಿತಿ ಲಭಿಸಿತ್ತು. ಈ ಮಾಹಿತಿ ಮೇರೆಗೆ ಸಂತಪೂರ ಪೊಲೀಸ್ ಠಾಣೆಯ ಪಿಎಸ್ಐ ನಂದಕುಮಾರ ಅವರು ತಮ್ಮ ಠಾಣೆಯ ಸಿಬ್ಬಂದಿಯೊಂದಿಗೆ ದಾಳಿ ಮಾಡಿದ್ದಾರೆ. ಆರೋಪಿಯಿಂದ 14,08,700 ರೂ. ಮೌಲ್ಯದ 14 ಕೆ.ಜಿ 87 ಗ್ರಾಂ ಗಾಂಜಾ, 20 ಸಾವಿರ ರೂ. ಮೌಲ್ಯದ ಒಂದು ದ್ವಿಚಕ್ರ ವಾಹನ ಹೀಗೆ 14,28,700 ರೂ. ಮೌಲ್ಯದ ವಸ್ತು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಸಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





