ಬೀದರ್ | ಅತಿವೃಷ್ಟಿ : ರೈತರ ಪ್ರತಿ ಎಕರೆಗೆ 25 ಸಾವಿರ ರೂ. ಪರಿಹಾರ ನೀಡಲು ಯುವ ಕ್ರಾಂತಿ ಸಂಘಟನೆ ಮನವಿ

ಬೀದರ್ : ಆಗಸ್ಟ್ ತಿಂಗಳಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಜಿಲ್ಲೆಯಲ್ಲಿ ರೈತರು ಬೆಳೆದ ಹೆಸರು, ಉದ್ದು, ತೊಗರಿ, ಸೋಯಾಬೀನ್ ಸೇರಿದಂತೆ ಸಾವಿರಾರು ಎಕರೆಯ ಬೆಳೆ ನಾಶವಾಗಿದೆ. ಹಾಗಾಗಿ ರೈತರು ಬೆಳೆದ ಪ್ರತಿ ಎಕರೆ ಭೂಮಿಗೆ 25 ಸಾವಿರ ರೂ. ಪರಿಹಾರ ನೀಡಬೇಕು ಎಂದು ಯುವ ಕ್ರಾಂತಿ ಸಂಘಟನೆ ಮನವಿ ಮಾಡಿದೆ.
ಇಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ನೂರಾರು ಮನೆ, ರಸ್ತೆ, ಸೇತುವೆಗಳಿಗೆ ಹಾನಿಯಾಗಿದೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ, ದವಸ ಧಾನ್ಯ ಹಾಳಾಗಿದ್ದು, ವಿದ್ಯುತ್ ಸಂಪರ್ಕವೂ ವ್ಯತ್ಯಯಗೊಂಡಿದೆ. ಜಿಲ್ಲಾಡಳಿತ ನಡೆಸಿದ ಪ್ರಾಥಮಿಕ ಸಮೀಕ್ಷೆಯ ಪ್ರಕಾರ ಸುಮಾರು 500 ಕೋಟಿ ರೂ. ನಷ್ಟ ಉಂಟಾಗಿದೆ. ಹಾಗಾಗಿ ಈ ಎಲ್ಲ ನಷ್ಟಗಳಿಗೆ ತಕ್ಷಣವೇ ಪರಿಹಾರ ನೀಡುವಂತೆ ಆಗ್ರಹಿಸಲಾಗಿದೆ.
ಹಾನಿಗೊಳಗಾದ ರೈತರಿಗೆ ಪ್ರತಿ ಎಕರೆಗೆ 25 ಸಾವಿರ ರೂ. ಪರಿಹಾರ ಧನ ನೀಡಬೇಕು. ಬೆಳೆ ವಿಮೆ ಮಾಡಿಕೊಂಡಿರುವ ರೈತರಿಗೆ ವಿಮಾ ಮೊತ್ತ ಬಿಡುಗಡೆ ಮಾಡಬೇಕು. ಡಿಸಿಸಿ ಬ್ಯಾಂಕ್‌ನಿಂದ ರೈತರಿಗೆ ಸಾಲ ದೊರಕುವಂತೆ ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಜೀವನಾಡಿಯಾದ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಕೂಡಲೆ ಪುನರಾರಂಭಿಸಬೇಕು ಎಂದು ಒತ್ತಾಯಿಸಲಾಗಿದೆ.
ಈ ಎಲ್ಲ ಬೇಡಿಕೆಗಳು ತಕ್ಷಣವೇ ಈಡೇರಿಸದಿದ್ದರೆ ಮುಂಬರುವ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಲಾಗಿದೆ.
ಈ ಸಂದರ್ಭದಲ್ಲಿ ಯುವ ಕ್ರಾಂತಿ ಸಂಘಟನೆಯ ಜಿಲ್ಲಾಧ್ಯಕ್ಷ ಸಂಗಮೇಶ್ ಭೂರೆ, ರಾಜಕುಮಾರ್ ಹಳ್ಳಿಖೇಡಕರ್, ಸಚಿನ್ ಮೋಳಕೇರಾ, ಅಮರ್ ಸೀಂದನಕೇರಾ, ಸಾಯಿ ರೆಡ್ಡಿ, ಗುಂಡಪ್ಪ ಪಾಟೀಲ್, ಚಂದ್ರು ನಾಗೂರ್ ಹಾಗೂ ಆಶಿಷ್ ಮೋಳಕೇರಾ ಸೇರಿದಂತೆ ಇತರರಿದ್ದರು.







