ಬೀದರ್ | ನ್ಯಾ.ನಾಗಮೋಹನದಾಸ್ ವರದಿಯಲ್ಲಿನ ತಪ್ಪುಗಳನ್ನು ತಿದ್ದುಪಡಿ ಮಾಡದಿದ್ದರೆ ರಸ್ತೆಗಿಳಿದು ಪ್ರತಿಭಟನೆ : ವಿಠಲದಾಸ್ ಪ್ಯಾಗೆ

ಬೀದರ್ : ಒಳಮೀಸಲಾತಿಗೆ ಸಂಬಂಧಪಟ್ಟಂತೆ ನ್ಯಾ.ನಾಗಮೋಹನದಾಸ್ ಸಮಿತಿಯು ಸಲ್ಲಿಸಿದ ವರದಿಯಲ್ಲಿ ಅವೈಜ್ಞಾನಿಕತೆಯಿಂದ ಕೂಡಿದ್ದು, ಇದರಲ್ಲಿ ಬಲಗೈ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ. ಆ ವರದಿಯಲ್ಲಿನ ತಪ್ಪುಗಳು ತಿದ್ದುಪಡಿ ಮಾಡದಿದ್ದರೆ ರಸ್ತೆಗಿಳಿದು ಪ್ರತಿಭಟನೆ ನಡೆಸಲಾಗುವುದು ಎಂದು ವಿಠಲದಾಸ್ ಪ್ಯಾಗೆ ಅವರು ಎಚ್ಚರಿಕೆ ನೀಡಿದರು.
ಇಂದು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, 101 ಜಾತಿಗಳಲ್ಲಿ 49 ಜಾತಿಗಳು ಬಲಗೈ ಹೊಲೆಯ ಸಮುದಾಯಕ್ಕೆ ಸೇರಿವೆ. 2011 ರ ಜನಗಣತಿ ಪ್ರಕಾರ ಪರಿಶಿಷ್ಟ ಜಾತಿಯಲ್ಲಿ 1 ಕೋಟಿ 7 ಲಕ್ಷ ಜನ ಎಂದು ತೋರಿಸಲಾಗಿದೆ. ಅದರಲ್ಲಿ ಬಲಗೈಗೆ ಸೇರಿರುವವರು ಸುಮಾರು 38 ಲಕ್ಷ ಜನ. ಆದರೆ ಇವತ್ತು ಇದನ್ನೆಲ್ಲ ಪರಿಗಣನೆಗೆ ತೆಗೆದುಕೊಳ್ಳಲಿಲ್ಲ. 49 ಜಾತಿಗಳಲ್ಲಿ ಒಡಕು ಉಂಟು ಮಾಡಿ ಅನ್ಯಾಯ ಮಾಡಿದ್ದಾರೆ ಎಂದರು.
ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ಧೆ ಅವರು ಮಾತನಾಡಿ, ನ್ಯಾ. ನಾಗಮೋಹನದಾಸ್ ಅವರ ಒಳಮೀಸಲಾತಿ ವರದಿಯನ್ನು ನಾವು ಒಪ್ಪುವುದಿಲ್ಲ. ಏಕೆಂದರೆ ಅದು ಅವೈಜ್ಞಾನಿಕವಾಗಿದೆ. ಬಲಗೈ ಹೊಲೆಯ ಸಮುದಾಯದವರ ಸಂಖ್ಯೆ ಕಡಿಮೆ ತೋರಿಸಿ, ನಮಗೆ ವ್ಯವಸ್ಥಿತವಾಗಿ ತುಳಿಯುವ ಹುನ್ನಾರ ಇದರಲ್ಲಿ ಅಡಗಿದೆ. ಇದನ್ನು ನಾವು ಖಂಡಿಸುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ರಮೇಶ ಡಾಕುಳಗಿ, ಸಂವಿಧಾನ ಸಂರಕ್ಷಣಾ ಸಮಿತಿಯ ರಾಜ್ಯ ಮಹಾಪ್ರಧಾನ ಕಾರ್ಯದರ್ಶಿ ಅನೀಲಕುಮಾರ ಬೆಲ್ದಾರ್, ಪ್ರಮುಖರಾದ ಶಿವರಾಜ್ ಕುದರೆ, ದೇವಿಂದ್ರ ಸೋನಿ, ಉಮೇಶ್ ಸ್ವಾರಳ್ಳಿಕರ್, ಕಾಂಗ್ರೇಸ್ ಮುಖಂಡ ಬಕ್ಕಪ್ಪ ಕೋಟೆ, ಬಾಬು ಪಾಸ್ವಾನ್, ಕಾಶಿನಾಥ್ ಚಲ್ವಾ, ಆರ್‌ಪಿಐ ಪಕ್ಷದ ಮಹೇಶ್ ಗೋರನಾಳಕರ್, ವಿನಯ ಮಾಳಗೆ, ವಿನೋದ್ ಅಪ್ಪೆ, ವಿನೋದ್ ಬಂದಗೆ, ಶಿವಕುಮಾರ್ ನೀಲಿಕಟ್ಟಿ, ರಾಜಕುಮಾರ್ ಬನ್ನೇರ್, ಸುನೀಲ್ ಸಂಗಮ, ಪ್ರಸನ್ನ ಡಾಂಗೆ, ರಮೇಶ್ ಮಂದಕನಳ್ಳಿ, ಶರಣು ಫುಲೆ ಹಾಗೂ ಶ್ರೀಪತರಾವ್ ದೀನೆ ಸೇರಿದಂತೆ ಇತರರು ಉಪಸ್ಥಿತರಿದ್ದರು.







