ಬೀದರ್ | ಒಳಮೀಸಲಾತಿ ವರದಿ ವಿರೋಧಿಸಿ ಆ.14 ರಂದು ಬಲಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ

ಬೀದರ್ : ಒಳಮೀಸಲಾತಿ ಜಾರಿಗೊಳಿಸಲು ನ್ಯಾ.ನಾಗಮೋಹನದಾಸ್ ಸಮಿತಿಯು ಸಲ್ಲಿಸಿದ ವರದಿಯನ್ನು ವಿರೋಧಿಸಿ ಬಲಗೈ ಸಮುದಾಯವು ಸಭೆ ನಡೆಸಿದ್ದು, ಆ.14 ರಂದು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.
ನಗರದ ಶಾಹ ಗಂಜ್ ಅಂಬೇಡ್ಕರ್ ಭವನದಲ್ಲಿ ರವಿವಾರ ಸಾಯಂಕಾಲ ನಡೆದ ಸಭೆಯಲ್ಲಿ ಬಲಗೈ ಸಮುದಾಯದ ಸುಮಾರು 200 ಕ್ಕೂ ಅಧಿಕ ಜನ ಸೇರಿ ಸಭೆ ನಡೆಸಲಾಗಿತ್ತು. ಒಳಮೀಸಲಾತಿಗೆ ಸಂಬಂಧಿಸಿದ ನ್ಯಾ.ನಾಗಮೋಹನದಾಸ್ ಅವರ ವರದಿಯಲ್ಲಿ ಬಲಗೈ ಸಮುದಾಯಕ್ಕೆ ಉದ್ದೇಶಪೂರ್ವಕವಾಗಿ ಅನ್ಯಾಯ ಮಾಡಲಾಗಿದೆ. ಇದರಿಂದಾಗಿ ನಮ್ಮ ಸಮುದಾಯದ ಭವಿಷ್ಯದ ಪೀಳಿಗೆಗೆ ತುಂಬಾ ತೊಂದರೆಯಾಗಲಿದೆ. ಇದರಿಂದಾಗಿ ನಾವು ಈ ವರದಿ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದ್ದು, ಇದನ್ನು ಜಾರಿಯಾಗಲು ಬಿಡುವುದಿಲ್ಲ ಎಂದು ಸಮಾಜದ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಆ.14 ರ ಬೆಳಿಗ್ಗೆ ಸುಮಾರು 11 ಗಂಟೆಗೆ ನಗರದ ಅಂಬೇಡ್ಕರ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಜಿಲ್ಲೆಯ ಸಾವಿರಾರು ಜನರು ಆಗಮಿಸಿ ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ಸಮುದಾಯದ ಪ್ರಮುಖರು ಮನವಿ ಮಾಡಿದ್ದಾರೆ.
ಸಭೆಯಲ್ಲಿ ಸಮಾಜದ ಪ್ರಮುಖ ಮುಖಂಡರಾದ ವಿಠಲದಾಸ್ ಪ್ಯಾಗೆ, ಮಾರುತಿ ಬೌದ್ದೆ, ಬಾಬುರಾವ್ ಪಾಸ್ವಾನ್, ಮಾಜಿ ಎಂಎಲ್ಸಿ ಅರವಿಂದಕುಮಾರ್ ಅರಳಿ, ಮಹೇಶ್ ಗೊರನಾಳಕರ್, ಅನಿಲಕುಮಾರ್ ಬೆಲ್ದಾರ್, ರಮೇಶ್ ಡಾಕುಳಗಿ, ವಿದ್ಯಾಸಾಗರ್ ಸಿಂಧೆ ಹಾಗೂ ಅರಹಂತ್ ಸಾವಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.







