ಬೀದರ್ | ಮಿನಿ ಬಸ್ ಡಿಕ್ಕಿ : ಆರೋಗ್ಯ ಇಲಾಖೆಯ ಮಹಿಳಾ ಸಿಬ್ಬಂದಿ ಮೃತ್ಯು

ಬೀದರ್ : ಕೋಳಾರ್ ಕೈಗಾರಿಕಾ ಪ್ರದೇಶದಲ್ಲಿರುವ ಸಾಯಿ ಕಂಪನಿಯ ಮಿನಿ ಬಸ್ ಡಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಆರೋಗ್ಯ ಇಲಾಖೆಯ ಮಹಿಳಾ ಸಿಬ್ಬಂದಿಯೊಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಗರದ ಅಂಬೇಡ್ಕರ್ ವೃತ್ತದಲ್ಲಿ ನಡೆದಿದೆ
ಭೀಮವ್ವಾ ಮಂಠಾಳೆ ಮೃತಪಟ್ಟ ಮಹಿಳಾ ಸಿಬ್ಬಂದಿಯಾಗಿದ್ದಾರೆ. ಇವರು ಮೂಲತಃ ಗಾದಗಿ ಗ್ರಾಮದವರಾಗಿದ್ದು, ಬೀದರ್ ನಗರದಲ್ಲಿಯೇ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಜಮಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಉಪಕೇಂದ್ರದಲ್ಲಿ ಕಿರಿಯ ಮಹಿಳಾ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ.
ಎಂದಿನಂತೆ ಇಂದು ಕೂಡ ಕರ್ತವ್ಯಕ್ಕೆ ಹಾಜರಾಗಲು ನಗರದ ಅಂಬೇಡ್ಕರ್ ವೃತ್ತದಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ರಭಸವಾಗಿ ಬಂದ ಮಿನಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಈ ಘಟನೆಗೆ ಸಂಬಂಧಿಸಿದಂತೆ ನಗರದ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.
Next Story





