ಬೀದರ್ | ಸಾರಿಗೆ ನಿಯಮ ಪಾಲನೆ ಮಾಡಿದರೆ ರಸ್ತೆ ಅಪಘಾತ ತಡೆಯಬಹುದು : ಜಿ.ಕೆ.ಬಿರಾದಾರ್

ಬೀದರ್ : ರಸ್ತೆ ಅಪಘಾತ ತಡೆಯಲು ಎಲ್ಲರ ಸಹಕಾರ ಅಗತ್ಯವಾಗಿದೆ. ಸಾರಿಗೆ ನಿಯಮಗಳನ್ನು ಅರಿತು, ಪಾಲನೆ ಮಾಡುವ ಮೂಲಕ ಶೇ.90 ರಷ್ಟು ಅಪಘಾತಗಳು ಕಡಿಮೆ ಮಾಡಬಹುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ.ಕೆ. ಬಿರಾದಾರ್ ಅವರು ಅಭಿಪ್ರಾಯಪಟ್ಟರು.
ಇಂದು ನಗರದ ಭೂಮರೆಡ್ಡಿ ಪದವಿ ಪೂರ್ವ ಹಾಗೂ ಪದವಿ ಮಹಾವಿದ್ಯಾಲಯದಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆ, ಭೂಮರೆಡ್ಡಿ ಪದವಿ ಪೂರ್ವ ಹಾಗೂ ಪದವಿ ಮಹಾವಿದ್ಯಾಲಯ ಮತ್ತು ಬೀದರ್ ಮೋಟಾರ್ ವಾಹನ ತರಬೇತಿ ಶಾಲೆ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ರಸ್ತೆ ಸುರಕ್ಷತಾ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಾಹನ ಚಲಾವಣೆ ಮಾಡುವಾಗ ಎಲ್ಲ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಂಡಿರಬೇಕು. ಮನೆಯಿಂದ ಹೊರ ಬರಬೇಕಾದರೆ ದಾಖಲೆಗಳನ್ನು ಒಂದು ಸಲ ನೋಡಿಕೊಳ್ಳಬೇಕು. ಸಕಾಲಕ್ಕೆ ದಾಖಲೆಗಳು ನವೀಕರಣ ಮಾಡಿಕೊಳ್ಳಬೇಕು ಎಂದರು.
ಕುಶಾಲ್ ಆಸ್ಪತ್ರೆಯ ವೈದ್ಯೆ ಡಾ.ಯೋಗೇಶ್ವರಿ ಪಾಟೀಲ್, ಕಾಲೇಜು ಪ್ರಾಂಶುಪಾಲ ಡಾ.ವಿಠಲರೆಡ್ಡಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಮೋಟಾರ್ ತರಬೇತಿ ವಾಹನ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವರಾಜ್ ಜಮಾದಾರ್, ಉಪ ಪ್ರಾಂಶುಪಾಲ ಅನಿಲಕುಮಾರ್ ಆಣದೂರೆ, ಉಪನ್ಯಾಸಕ ಸಂತೋಷ್ ರಾಯಕೋಡೆ, ಬೀದರ್ ಮೋಟಾರ್ ತರಬೇತಿ ವಾಹನ ಸಂಘದ ಅಧ್ಯಕ್ಷ ಪ್ರಕಾಶ್ ಗುಮ್ಮೆ, ಬಸವರಾಜ್ ಬಿರಾದಾರ್ ನಿರೂಪಣೆ, ಡಾ. ಮಲ್ಲಿಕಾರ್ಜುನ್ ಕೋಟೆ, ಉಪನ್ಯಾಸಕಿಯರಾದ ಮೀರಾ ಖೇಣಿ, ನೇತ್ರಾ, ಕವಿತಾ, ಸುನಂದಾ ಹಾಗೂ ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿ ಸೇರಿದಂತೆ ಇತರರು ಹಾಜರಿದ್ದರು.







