ಬೀದರ್ | ಸರಕಾರಿ ಉರ್ದು ಪ್ರೌಢ ಶಾಲೆಯ ಮೇಲ್ಛಾವಣಿ ಸೋರಿಕೆ : ಹೊಸ ಕೋಣೆ ನಿರ್ಮಾಣಕ್ಕೆ ಗ್ರಾಮಸ್ಥರಿಂದ ಮನವಿ

ಬೀದರ್ : ಮಳೆಯಿಂದಾಗಿ ಸಿಂಧನಕೇರಾ ಗ್ರಾಮದಲ್ಲಿರುವ ಸರಕಾರಿ ಉರ್ದು ಪ್ರೌಢ ಶಾಲೆ ಮೇಲ್ಛಾವಣಿ ಸಂಪೂರ್ಣವಾಗಿ ಸೋರಿಕೆಯಾಗುತ್ತಿದ್ದು, ಬೀಳುವ ಹಂತಕ್ಕೆ ತಲುಪಿದೆ. ಹೊಸ ಕೋಣೆಗಳು ನಿರ್ಮಾಣ ಮಾಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಇಂದು ಹುಮನಾಬಾದ್ ನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಮಳೆಯಿಂದಾಗಿ ಸಿಂಧನಕೇರಾ ಗ್ರಾಮದಲ್ಲಿರುವ ಸರಕಾರಿ ಉರ್ದು ಹಿರಿಯ ಪ್ರೌಢ ಶಾಲೆಯ ಅಡುಗೆ ಕೋಣೆ ಮತ್ತು ತರಗತಿ ಕೋಣೆಯ ಮೇಲ್ಛಾವಣಿಯನ್ನು ಸೋರುತ್ತಿವೆ. ಇದರಿಂದಾಗಿ ದಿನಸಿ ಸಾಮಗ್ರಿಗಳ ಮೇಲೆ ನೀರು ಸೋರಿ ಸಂಪೂರ್ಣವಾಗಿ ಹಾಳಾಗುತ್ತಿದೆ. ಕಟ್ಟಡವು ಬೀಳುವ ಹಂತಕ್ಕೆ ತಲುಪಿದೆ ಎಂದು ತಿಳಿಸಿದ್ದಾರೆ.
ಈ ಶಾಲೆಯು 1 ರಿಂದ 7ನೆ ತರಗತಿವರೆಗಿದ್ದು, ಒಟ್ಟು 90 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದಷ್ಟು ಬೇಗ ಸರಕಾರಿ ಉರ್ದು ಪ್ರೌಢ ಶಾಲೆ ಕಟ್ಟಡಕ್ಕೋಸ್ಕರ ಸರಕಾರದಿಂದ ಅನುದಾನ ನೀಡಿ, ಹೊಸ ಶಾಲಾ ಕಟ್ಟಡ ಕಟ್ಟಿ ಮಕ್ಕಳ ಒಳ್ಳೆಯ ವಿದ್ಯಾಭ್ಯಾಸಕ್ಕಾಗಿ ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಶೇಕ್ ಸರ್ದಾರ್, ಶೇಕ್ ಸತ್ತರ್, ಅನಿಲ್ ದೊಡ್ಡಿ, ಅರವಿಂದ್ ಜೋಗಿರೆ, ಮುಹಮ್ಮದ್ ಸಾಜಿದ್, ಮುಹಮ್ಮದ್ ಅಮಾನ್, ಮುಹಮ್ಮದ್ ಹಾಜಿ, ಮುಹಮ್ಮದ್ ಮೋದಿನ್, ಯುವರಾಜ್ ಎಸ್. ಐಹೋಳ್ಳಿ, ಶೇಕ್ ಫೀರ್ದೋಸ್, ಮಜೀದ್ ಷಾ ಹಾಗೂ ತಕಿ ಪಾಷಾ ಇದ್ದರು.







