ಬೀದರ್ | ಸೆ.22ರಿಂದ ಜಿಲ್ಲಾದ್ಯಂತ ಎಲ್ಲಾ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ : ಡಿಸಿ ಶಿಲ್ಪಾ ಶರ್ಮಾ

ಬೀದರ್ : ಸೆ. 22 ರಿಂದ ಜಿಲ್ಲಾದ್ಯಂತ ಎಲ್ಲಾ ವರ್ಗಗಳ ಅಥವಾ ಜಾತಿಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ತಿಳಿಸಿದರು.
ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಎಲ್ಲಾ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಕುರಿತ ಸಮೀಕ್ಷೆ ಬಗ್ಗೆ ಜಿಲ್ಲಾ ಮಟ್ಟದ ಸಮನ್ವಯ ಸಮಿತಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸೆ. 22 ರಿಂದ ಅ.7 ರವರೆಗೆ ಜಿಲ್ಲಾದ್ಯಂತ ಎಲ್ಲಾ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಕುರಿತು ಸಮೀಕ್ಷೆ ಕೈಗೊಳ್ಳಲಾಗುವುದು. ಸಮೀಕ್ಷೆಗಾಗಿ ರಾಜ್ಯ ಮಟ್ಟದಲ್ಲಿ ತರಬೇತಿ ಪಡೆದ ಮಾಸ್ಟರ್ ಟ್ರೈನರ್ ಗಳಿಂದ ಜಿಲ್ಲಾ ಮಟ್ಟದಲ್ಲಿ ಮಾಸ್ಟರ್ ಟ್ರೈನರ್ ಗಳ ತರಬೇತಿ ನೀಡಲು ಆಯೋಜಿಸಲಾಗುವುದು. ಸರ್ಕಾರಿ ಶಿಕ್ಷಕರನ್ನು ಮತ್ತು ಇತರೆ ಇಲಾಖೆಗಳ ಅಧಿಕಾರಿಗಳನ್ನು ಸಮೀಕ್ಷೆದಾರರು ಮತ್ತು ಮೇಲ್ವಿಚಾರಕರಾಗಿ ನಿಯೋಜಿಸಲಾಗುವುದು ಎಂದರು.
ಸಮೀಕ್ಷೆದಾರರ ಮಾಹಿತಿಯನ್ನು ಪೋರ್ಟಲ್ ನಲ್ಲಿ ಅಪ್ಲೋಡ್ ಮಾಡಬೇಕು. 90 ಮಾಸ್ಟರ್ ಟ್ರೈನರ್ ಗಳು, 450 ಮೇಲ್ವಿಚಾರಕರು, 4,400 ಸಮೀಕ್ಷೆದಾರರು ಸಮೀಕ್ಷೆ ಪ್ರಕ್ರಿಯೆಯಲ್ಲಿ ಇರಲಿದ್ದಾರೆ. ಜಿಲ್ಲೆಯಲ್ಲಿರುವ 3.40 ಲಕ್ಷ ಮನೆಗಳು, ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗ ಮತ್ತು ತಾಂಡಗಳು, ಇತರೆ ಯಾರೇ ಜಿಲ್ಲೆಯಲ್ಲಿ ವಾಸಿಸುವರ ಸಂಪೂರ್ಣ ಮತ್ತು ಸ್ಪಷ್ಟವಾಗಿ ಸಮೀಕ್ಷೆ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಅವರು ಸೂಚಿಸಿದರು.
ಈಗಾಗಲೇ ಇಂಧನ ಇಲಾಖೆಯಿಂದ ಮೀಟರ್ ರೀಡರ್ ಮೂಲಕ ಮನೆಗೆ UHID ವಿವರದೊಂದಿಗೆ ಸ್ಟಿಕರ್ ಅಂಟಿಸುವ ಕ್ರಮವಹಿಸಲಾಗಿದೆ. ಹಾಗೆಯೇ ಜಿಯೋ ಟ್ಯಾಗ್ (Geo tag) ಮಾಡಲಾಗಿದೆ. NSS ವಿದ್ಯಾರ್ಥಿಗಳ ಮೂಲಕ ಸಮೀಕ್ಷಾ ನಮೂನೆಯಗಳನ್ನು ಮನೆ ಮನೆಗೆ ವಿತರಿಸಿ ಅರಿವು ಮೂಡಿಸುವ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ್ ಕರಾಳೆ, ಸಹಾಯಕ ಆಯುಕ್ತ ಮುಹಮದ್ ಶಕೀಲ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಸುನಿತಾ ಶಿವಾನಂದ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.







