ಬೀದರ್ | ಹಿಂಸಾಚಾರ ತ್ಯಜಿಸಿ ಸೌಹಾರ್ದತೆ ಉತ್ತೇಜಿಸುವುದೇ ಸದ್ಭಾವನಾ ದಿನದ ಮೂಲ ಉದ್ದೇಶ : ಡಾ.ಎಸ್.ವಿ.ಪಾಟೀಲ್

ಬೀದರ್ : ಎಲ್ಲಾ ಧರ್ಮ, ಭಾಷೆ ಹಾಗೂ ಜನರಲ್ಲಿ ಸೌಹಾರ್ದತೆ ಉತ್ತೇಜಿಸಿ, ಸದ್ಭಾವನೆ ಮೂಡಿಸಿ ಹಿಂಸಾಚಾರ ತ್ಯಜಿಸುವಂತೆ ಮಾಡುವುದೇ ಸದ್ಭಾವನಾ ದಿನದ ಮೂಲ ಧ್ಯೇಯ ಉದ್ದೇಶವಾಗಿದೆ ಎಂದು ತೋಟಗಾರಿಗೆ ಮಹಾವಿದ್ಯಾಲಯದ ಡೀನ್ ಡಾ.ಎಸ್.ವಿ.ಪಾಟೀಲ್ ಅವರು ಹೇಳಿದರು.
ಇಂದು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟದ ಅಧೀನದಲ್ಲಿರುವ ತೋಟಗಾರಿಕೆ ಮಹಾವಿದ್ಯಾಲಯ, ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸದ್ಭಾವನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜಮುಖಿ ಚಿಂತನೆ ಮತ್ತು ದೇಶದ ಏಕತೆಗಾಗಿ ದುಡಿದವರ ಕೆಲಸಗಳನ್ನು ನೆನಪಿಟ್ಟುಕೊಳ್ಳಲು ಈ ದಿನವನ್ನು ಆಚರಿಸಲಾಗುತ್ತದೆ. ಭಾರತ ವೈವಿಧ್ಯಮಯ ಸಂಸ್ಕೃತಿ ಮತ್ತು ಪರಂಪರೆ ಹೊಂದಿರುವ ದೇಶವಾಗಿದೆ. ನಾವೆಲ್ಲರೂ ವಿವಿಧ ಜಾತಿ, ಧರ್ಮ ಮತ್ತು ಭಾಷೆಗಳು ಅನುಸರಿಸುತ್ತೇವೆ. ಆದಾಗ್ಯ ನಾವು ಎಲ್ಲರೂ ಭಾರತೀಯರು ಮತ್ತು ನಾವೆಲ್ಲರೂ ಒಗ್ಗಟ್ಟಾಗಿ ಬದುಕಿದ್ದಲ್ಲಿ ಮಾತ್ರ ಇಂತಹ ದಿನಾಚರಣೆ ಆಚರಿಸಿದಕ್ಕೂ ಸಾರ್ಥಕವಾಗುತ್ತದೆ ಎಂದರು.
ಪ್ರತಿಯೊಬ್ಬರು ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಗೌರವದಿಂದ ಬದುಕಬೇಕು. ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ನಮ್ಮ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ನಾವೆಲ್ಲರೂ ಒಟ್ಟಾಗಿ ದಕ್ಷತೆ ಮತ್ತು ಪ್ರಾಮಾಣಿಕವಾಗಿ ಇರಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಾತಿ, ಧರ್ಮ, ಪ್ರದೇಶ, ಮತ ಹಾಗೂ ಭಾಷೆಯ ಬೇಧಭಾವವಿಲ್ಲದೇ ಭಾರತದ ಎಲ್ಲ ಜನತೆಯ ಭಾವೈಕ್ಯ ಮತ್ತು ಸೌಹಾರ್ದಕ್ಕಾಗಿ ಕಾರ್ಯನಿರ್ವಹಿಸುತ್ತೇನೆ. ಹಿಂಸಾಚಾರಕ್ಕೆ ಅವಕಾಶ ನೀಡದೆ ಸಮಾಲೋಚನೆ ಹಾಗೂ ಸಂವಿಧಾನಾತ್ಮಕ ಕ್ರಮಗಳ ಮೂಲಕ ಪರಿಹರಿಸುತ್ತೇನೆ ಎಂದು ಪ್ರತಿಜ್ಞೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ, ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.







