ಬೀದರ್ | ಮಾಣಿಕೇಶ್ವರ್ ಗ್ರಾಮದಲ್ಲಿ ನೀರು ಶುದ್ಧೀಕರಣ ಘಟಕ ನಿರುಪಯುಕ್ತ : ಗ್ರಾಮಸ್ಥರ ಆಕ್ರೋಶ

ಹುಲಸೂರ್ : ಭಾಲ್ಕಿ ತಾಲೂಕಿನ ಮಾಣಿಕೇಶ್ವರ್ ಗ್ರಾಮದಲ್ಲಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಸ್ಥಾಪಿಸಲಾಗಿರುವ ನೀರು ಶುದ್ಧೀಕರಣ ಘಟಕ ಹಲವು ತಿಂಗಳುಗಳಿಂದ ನಿರುಪಯುಕ್ತವಾಗಿ ಉಳಿದಿದ್ದು, ಶುದ್ಧ ನೀರಿನ ಸೌಲಭ್ಯದಿಂದ ಗ್ರಾಮಸ್ಥರು ವಂಚಿತರಾಗಿದ್ದಾರೆ. ಘಟಕದ ಯಂತ್ರೋಪಕರಣಗಳಲ್ಲಿ ತಾಂತ್ರಿಕ ದೋಷವಿಲ್ಲದಿದ್ದರೂ, ಅದಕ್ಕೆ ಸಂಪರ್ಕ ಕಲ್ಪಿಸಿರುವ ಬೋರ್‌ವೆಲ್ ಚರಂಡಿಯು ಸಮೀಪದಲ್ಲಿರುವ ಕಾರಣ ನೀರು ದುರ್ವಾಸನೆ ಬರುತ್ತಿದ್ದು, ಕುಡಿಯಲು ಯೋಗ್ಯವಲ್ಲದ ಸ್ಥಿತಿ ನಿರ್ಮಾಣವಾಗಿದೆ.
ಸರಕಾರದ ಅನುದಾನದಲ್ಲಿ ನಿರ್ಮಿಸಲಾದ ಈ ಘಟಕ ಗ್ರಾಮಸ್ಥರಿಗೆ ಸುರಕ್ಷಿತ ಕುಡಿಯುವ ನೀರು ಒದಗಿಸುವ ಉದ್ದೇಶ ಹೊಂದಿತ್ತು. ಆದರೆ ಬೋರ್‌ವೆಲ್ ಸುತ್ತಮುತ್ತಲಿನ ಪರಿಸರ ಮತ್ತು ಚರಂಡಿಯ ನೀರಿನ ಪ್ರಭಾವದಿಂದ ನೀರಿನ ಗುಣಮಟ್ಟ ಕುಸಿದಿದೆ ಎಂಬ ಆರೋಪ ಕೇಳಿ ಬಂದಿದೆ.
ಗ್ರಾಮದಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಶುದ್ಧ ನೀರಿನ ಘಟಕ ಬಳಕೆಗೆ ಬಾರದಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಶುದ್ಧ ನೀರಿನ ವ್ಯವಸ್ಥೆ ಅತ್ಯಗತ್ಯವಾಗಿದ್ದರೂ, ಸಮಸ್ಯೆ ಪರಿಹಾರಕ್ಕೆ ವಿಳಂಬವಾಗುತ್ತಿರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಬಂಧಪಟ್ಟ ಇಲಾಖೆಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು. ಶೀಘ್ರದಲ್ಲಿ ಸುರಕ್ಷಿತ ಮತ್ತು ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸರ್ಕಾರದ ಹಣವನ್ನು ಗುತ್ತಿಗೆದಾರ ಹಾಗೂ ಅಧಿಕಾರಿಗಳು ಸೇರಿಕೊಂಡು ಕೊಳ್ಳೆ ಹೊಡೆಯುವ ಹುನ್ನಾರ ನಡೆಸಿದ್ದಾರೆ. ಜನರ ತೆರಿಗೆ ಹಣದಲ್ಲಿ ನಿರ್ಮಿಸಿದ ಯೋಜನೆಗಳು ಹೀಗೆ ಉಪಯೋಗಕ್ಕೆ ಬಾರದಿರುವುದು ದುರಂತ. ಇಂತಹ ಪ್ರಕರಣಗಳ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಗ್ರಾಮಸ್ಥ ಶಂಕರ್ ವಾಗ್ಮಾರೆ ಹೇಳಿದ್ದಾರೆ.
ನೀರು ಶುದ್ಧೀಕರಣ ಘಟಕದಲ್ಲಿ ಯಾವುದೇ ತಾಂತ್ರಿಕ ಸಮಸ್ಯೆ ಇಲ್ಲ. ಆದರೆ ಘಟಕಕ್ಕೆ ಸಂಪರ್ಕ ಕಲ್ಪಿಸಿರುವ ಬೋರ್‌ವೆಲ್ ಚರಂಡಿಯ ಸಮೀಪದಲ್ಲಿರುವುದರಿಂದ ನೀರು ದುರ್ವಾಸನೆ ಬರುತ್ತಿದೆ. ಈ ಕಾರಣದಿಂದ ನೀರು ಕುಡಿಯಲು ಯೋಗ್ಯವಾಗಿಲ್ಲ. ಸಮಸ್ಯೆ ಕುರಿತು ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಪ್ರಸ್ತುತ ಗ್ರಾಮ ಪಂಚಾಯಿತಿಯಲ್ಲಿ ಬೋರ್‌ವೆಲ್‌ನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸಲು ಅಗತ್ಯ ಅನುದಾನ ಇಲ್ಲ. ಸರಕಾರದಿಂದ ಅನುದಾನ ಬಿಡುಗಡೆಯಾದ ಬಳಿಕ ಬೋರ್‌ವೆಲ್ ಸ್ಥಳಾಂತರಿಸಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅಟ್ಟರಗಾ ಗ್ರಾಮ ಪಂಚಾಯಿತಿ ಪಿಡಿಒ ಧೋಂಡಿರಾಮ್ ಬಾಮನೆ ಹೇಳಿದ್ದಾರೆ.






