ರೈತರು ಭಯ ಪಡಬಾರದು, ರಾಜ್ಯ ಸರಕಾರ ರೈತರೊಂದಿಗಿದೆ: ಡಾ. ಭೀಮಸೇನರಾವ್ ಶಿಂಧೆ

ಔರಾದ್ : ತಾಲೂಕಿನಲ್ಲಿ ಧಾರಾಕಾರ ಮಳೆಯಿಂದ ರೈತರು ಬೆಳೆ ಕಳೆದುಕೊಂಡಿದ್ದಾರೆ. ರೈತರು ಯಾವುದೇ ಕಾರಣಕ್ಕೂ ಹೆದರಬಾರದು. ಏಕೆಂದರೆ ರಾಜ್ಯದ ಕಾಂಗ್ರೆಸ್ ಸರಕಾರ ರೈತರೊಂದಿಗೆ ಸದಾ ಇರುತ್ತದೆ ಎಂದು ಕಾಂಗ್ರೆಸ್ ಮುಖಂಡ ಡಾ. ಭೀಮಸೇನರಾವ್ ಶಿಂಧೆ ಅವರು ಹೇಳಿದರು.
ತಾಲೂಕಿನ ಮಣಿಗೇಂಪೂರ್, ಧೂಪತಮಗಾಂವ್, ಬಾಚೇಪಳ್ಳಿ, ಬಾಬಳಿ, ಕೌಠಾ (ಕೆ), ಕೌಠಾ (ಬಿ), ಹೇಡಗಾಪೂರ್, ನಿಟ್ಟೂರ್ (ಕೆ), ನಿಟ್ಟೂರ್ (ಬಿ), ರಕ್ಷಾಳ್ ಹಾಗೂ ರಕ್ಷಾಳ್ (ಬಿ) ಸೇರಿದಂತೆ ಅನೇಕ ಗ್ರಾಮಗಳಲ್ಲಿನ ನದಿ, ಕೆರೆ, ಬ್ರಿಡ್ಜ್, ಬೆಳೆ ಹಾನಿಯಾಗಿರುವದನ್ನು ಪರಿಶೀಲಿಸಿ, ರೈತರಿಗೆ ಧೈರ್ಯ ತುಂಬಿ ಮಾತನಾಡಿದರು.
ತಾಲೂಕಿನ ಬೋಂತಿ ತಾಂಡದ ಇಂಗು ಕೆರೆ ಒಡೆದಿದ್ದು, ಕೆರೆಯ ಪುನಶ್ಚೇತನಕ್ಕೆ ರಾಜ್ಯ ಕಾಂಗ್ರೆಸ್ ಸರಕಾರ 1.50 ಕೋಟಿ ರೂ. ಅನುಮೋದನೆ ನೀಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಕೆರೆಗೆ ಭೇಟಿ ನೀಡಿ, ಸಿಎಂ ಅವರಿಗೆ ಮನವರಿಕೆ ಮಾಡಿದ್ದಾರೆ. ನಾನು ಕುಡಾ ಸಿಎಂ ಅವರಿಗೆ ಭೇಟಿಯಾಗಿ ಸಮಸ್ಯೆ ತಿಳಿಸಿದ್ದು, ಕೆರೆಯ ಪುನಶ್ಚೇತನಕ್ಕೆ 1.50 ಕೋಟಿ ರೂ. ಅನುಮೋದನೆ ಸಿಕ್ಕಿದೆ ಎಂದು ಅವರು ತಿಳಿಸಿದರು.
ರೈತರ ಪರ ಹಾಗೂ ಕೃಷಿ ಕ್ಷೇತ್ರದ ಸುಧಾರಣೆಗೆ ಅತೀ ಹೆಚ್ಚು ಆದ್ಯತೆ ನೀಡುವದು ಕಾಂಗ್ರೆಸ್ ಸರಕಾರವಿದೆ. ಅಧಿಕಾರಿಗಳು ಸರಿಯಾಗಿ ಸಮೀಕ್ಷೆ ಮಾಡಿ ಸರಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಸೂಚಿಸಿದ ಅವರು, ರೈತರು ಯಾವುದೇ ಕಾರಣಕ್ಕೂ ಹೆದರಬಾರದು. ಹಾನಿಯಾದ ಬೆಳೆ ಪರಿಹಾರ ಸರಕಾರ ನೀಡಲಿದೆ ಎಂದು ರೈತರಿಗೆ ಧೈರ್ಯ ತುಂಬಿದರು.
ತಾಲೂಕಿನ ಕೆರೆ, ಬ್ರಿಡ್ಜ್ , ಸೇರಿದಂತೆ ಮಾಂಜ್ರಾ ನದಿ ಅಂಚಿನ ಜಮೀನಿನಲ್ಲಿ ಬೆಳೆಯೊಂದಿಗೆ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗಿದೆ. ಇದರಿಂದ ಮುಂದಿನ ಬೆಳೆಯೂ ಬೆಳೆಯದಂತಹ ಬರಡು ಭೂಮಿಯಾಗಿದೆ. ರೈತರು ಸಂಕಷ್ಟದಲ್ಲಿದ್ದು, ಇದಕ್ಕಾಗಿ ವಿಶೇಷ ಅನುದಾನ ನೀಡುವಂತೆ ಸರಕಾರಕ್ಕೆ ಮನವಿಪತ್ರ ಸಲ್ಲಿಸುವದಾಗಿ ಅವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಚನ್ನಪ್ಪ ಉಪ್ಪೆ, ರಾಮಣ್ಣ ವಡಿಯಾರ್, ಶಿವರಾಜ್ ದೇಶಮುಖ, ಶ್ರೀಮಂತ್ ಬಿರಾದಾರ್, ಹಣಮಂತ್ ಪಾಟೀಲ್ ಹಾಗೂ ಜಾನಸನ್ ಸೇರಿದಂತೆ ಅನೇಕರಿದ್ದರು.







