ಬೀದರ್ ಕ್ಷೇತ್ರವನ್ನು ಪ್ರಧಾನಮಂತ್ರಿ ಧನ್ ಧಾನ್ಯ ಕೃಷಿ ಯೋಜನೆಗೆ ಸೇರಿಸುವಂತೆ ಸಂಸದ ಸಾಗರ ಖಂಡ್ರೆ ಮನವಿ

ಬೀದರ್ : ಬೀದರ್ ಲೋಕಸಭಾ ಕ್ಷೇತ್ರವನ್ನು ಪ್ರಧಾನಮಂತ್ರಿ ಧನ್ ಧಾನ್ಯ ಕೃಷಿ ಯೋಜನೆಗೆ (PMDDKY) ಸೇರಿಸುವಂತೆ ಸಂಸದ ಸಾಗರ್ ಖಂಡ್ರೆ ಅವರು ಮನವಿ ಮಾಡಿದ್ದಾರೆ.
ದೆಹಲಿಯ ಸಂಸತ್ ಕಚೇರಿಯಲ್ಲಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ ಅವರನ್ನು ಭೇಟಿ ಮಾಡಿದ ಅವರು, ಬೀದರ್ ಜಿಲ್ಲೆಯನ್ನು ಪ್ರಧಾನಮಂತ್ರಿ ಧನ್ ಧಾನ್ಯ ಕೃಷಿ ಯೋಜನೆಗೆ (PMDDKY) ಸೇರಿಸುವಂತೆ ಮನವಿ ಪತ್ರ ಹಾಗೂ ವಿವರವಾದ ವರದಿ ಸಲ್ಲಿಸಿದ್ದಾರೆ.
ಈ ಯೋಜನೆ ಅಡಿಯಲ್ಲಿ ದೇಶದ 100 ಜಿಲ್ಲೆಗಳನ್ನು ಆಯ್ಕೆ ಮಾಡಲಾಗುತ್ತಿದ್ದು, ಅದರಲ್ಲಿ ಬೀದರ್ ಜಿಲ್ಲೆ ಕೂಡ ಸೇರಿಸಬೇಕು. ಈ ಯೋಜನೆಯಲ್ಲಿ ಆರು ವರ್ಷಗಳ ಕಾಲ ಪ್ರತಿ ವರ್ಷ 24,000 ಕೋಟಿ ರೂ. ಅನುದಾನ ನೀಡಲಾಗುವುದು. ಒಟ್ಟು 1.44 ಲಕ್ಷ ಕೋಟಿ ರೂ. ಈ ಯೋಜನೆಗೆ ಮೀಸಲಿರಲಿದೆ ಎಂದು ತಿಳಿಸಿದ್ದಾರೆ.
ಈ ಯೋಜನೆಯ ಅನುಷ್ಠಾನದಿಂದ ಬೀದರ್ ಜಿಲ್ಲೆಯ ಕೃಷಿ ಕ್ಷೇತ್ರ ಮತ್ತಷ್ಟು ಬಲ ಪಡೆದು, ರೈತರಿಗೆ ಉತ್ತಮ ಅವಕಾಶ, ಆಧುನಿಕ ಕೃಷಿ ಸೌಲಭ್ಯ ಹಾಗೂ ಸಮೃದ್ಧ ಜೀವನದ ದಾರಿ ಸುಗಮವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.





