ಮನೆ ಮನೆಗೆ ಅಂಬೇಡ್ಕರ್ ಅಭಿಯಾನವು ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಪ್ರಜ್ಞೆ ಮೂಡಿಸಲಿ : ಭಂತೆ ವರಜ್ಯೋತಿ

ಬೀದರ್ : ಬುದ್ಧ ಬೆಳಕು ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ನ ಅಡಿಯಲ್ಲಿ ನಡೆಯುವ ಮನೆ ಮನೆಗೆ ಅಂಬೇಡ್ಕರ್ ಅಭಿಯಾನವು ಶೈಕ್ಷಣಿಕ, ಸಾಮಾಜಿಕ ಮತ್ತು ರಾಜಕೀಯ ಪ್ರಜ್ಞೆ ಮೂಡಿಸಲಿ ಎಂದು ಭಂತೆ ವರಜ್ಯೋತಿ ಅವರು ನುಡಿದರು.
ನಗರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿನಿಬ್ಬಾಣ ದಿನದ ನಿಮಿತ್ತ ಡಿ.6ರ, 2025 ರಿಂದ ಎ.14, 2026 ರ ಡಾ.ಅಂಬೇಡ್ಕರ್ ಅವರ ಜಯಂತಿವರೆಗೆ ನಡೆಯುವ 'ಮನೆ ಮನೆಗೆ ಅಂಬೇಡ್ಕರ್' ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬುದ್ದ ಭಾರತ ಸಮೃದ್ಧ ಭಾರತವಾಗಿದೆ. ಆದರೆ ಇಂದು ಮನುವಾದಿಗಳಿಂದ ದ್ವೇಷ, ಅಂದಕಾರ, ಅವೈಜ್ಞಾನಿಕತೆಯಿಂದ ಅದು ನಾಶವಾಗುತ್ತಿದೆ ಎಂದರು.
ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು 2,500 ವರ್ಷದ ಇತಿಹಾಸ ಅಧ್ಯಯನ ಮಾಡಿ, ಅಳಿದು ಹೋಗಿದ್ದ ಬುದ್ಧ ತತ್ವದ ಗತವೈಭವವನ್ನು ಸಂವಿಧಾನದ ಮೂಲಕ ಮರಳಿ ತಂದಿದ್ದಾರೆ. ಇಂದು ಸಂವಿಧಾನದ ಮೂಲಕವಾಗಿ ಬಡವರು, ಹಿಂದೂಳಿದ ವರ್ಗದವರು, ಅಲ್ಪಸಂಖ್ಯಾತ̧ರು ಶೋಷಿತರು, ಮಹಿಳೆಯರು ಹೀಗೆ ಎಲ್ಲರೂ ಶಿಕ್ಷಕಿ, ಡಾಕ್ಟರ್, ಇಂಜಿನಿಯರ್, ಪೈಲಟ್, ವಿಜ್ಞಾನಿ, ಶಾಸ̧ಕಿ ಮಂತ್ರಿ, ಮುಖ್ಯಮಂತ್ರಿ, ಪ್ರಧಾನಿ ಹಾಗೂ ರಾಷ್ಟ್ರಪತಿ ಆಗುತ್ತಿದ್ದಾರೆ. ದೇಶದ ಪ್ರತಿಯೊಬ್ಬ ಗಂಡು-ಹೆಣ್ಣು ಶೈಕ್ಷಣಿಕವಾಗಿ, ಧಾರ್ಮಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಅಭಿವೃದ್ಧಿ ಹೊಂದುತ್ತಿದ್ದಾರೆ. ಇದನ್ನು ಸಹಿಸದವರು ಡಾ. ಅಂಬೇಡ್ಕರ್ ಅವರ ಬಗ್ಗೆ ಮತ್ತು ಸಂವಿಧಾನ ಬಗ್ಗೆ ಅವಹೇಳನಕಾರಿ ಮಾತನಾಡುತ್ತಿದ್ದಾರೆ. ಇದರ ಕುರಿತು ಜಾಗೃತಿ ಮೂಡಿಸಲು ಮನೆ ಮನೆಗೆ ಅಂಬೇಡ್ಕರ್ ಅಭಿಯಾನ ಪೂರಕವಾಗಿದೆ. ಈ ಅಭಿಯಾನ ಯಶಸ್ವಿಯಾಗಬೇಕು ಎಂದು ಅವರು ಶುಭ ಕೋರಿದರು.
ಮನೆ ಮನೆಗೆ ಅಂಬೇಡ್ಕರ್ ಅಭಿಯಾನದ ಸಂಚಾಲಕ, ಬುದ್ಧ ಬೆಳಕು ಟ್ರಸ್ಟ್ ಅಧ್ಯಕ್ಷ ಮಹೇಶ್ ಗೋರನಾಳಕರ್ ಅವರು ಮಾತನಾಡಿ, ಅಂಬೇಡ್ಕರ್ ಅಂದರೆ ಶಿಕ್ಷಣ, ಮಹಿಳಾ ಅಭಿವೃದ್ಧಿ, ಉದ್ಯೋಗ, ಮೀಸಲಾತಿ, ಸಮಾನತೆ, ಬಂಧುತ್ವ, ಜಾತ್ಯತೀತ, ಭ್ರಾತೃತ್ವ, ರಾಷ್ಟ್ರಪ್ರೇಮ, ದೇಶದ ಸರ್ವಾಂಗೀಣ ಅಭಿವೃದ್ಧಿಯಾಗಿದೆ ಎಂದು ಹೇಳಿದರು.
ಮನೆ ಮನೆಗೆ ಅಂಬೇಡ್ಕರ್ ಅಭಿಯಾನ ಅನುಷ್ಠಾನ ಸಮಿತಿಯ ಅಧ್ಯಕ್ಷ ಡಾ.ಕಾಶಿನಾಥ್ ಚೆಲ್ವಾ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆ ಜಿಲ್ಲಾಧ್ಯಕ್ಷ ಅಮೃತರಾವ್ ಚಿಮಕೊಡೆ, ಹೋರಾಟಗಾರ ಪ್ರಮುಖರಾದ ರಮೇಶ್ ಡಾಕುಳಗಿ, ಅನೀಲಕುಮಾರ್ ಬೆಲ್ದಾರ್, ಬಾಬುರಾವ್ ಪಾಸ್ವಾನ್, ದಶರಥ್ ಗುರು, ಶ್ರೀಪತರಾವ್ ದಿನೆ, ಶಿವಕುಮಾರ್ ನೀಲಿಕಟ್ಟಿ, ರಮೇಶ್ ಸಾಗರ್, ಶರಣು ಫುಲೆ, ಪ್ರಕಾಶ್ ರಾವಣ, ಹರ್ಷಿತ್ ದಾಂಡೆಕರ್, ಅಂಬಾದಾಸ್ ಗಾಯಕವಾಡ್, ಉಲ್ಲಾಸಿನಿ ಮುದಾಳೆ, ಲುಂಬಿಣಿ, ಸಂಗೀತಾ ಕಾಂಬಳೆ, ಪ್ರದೀಪ್ ನಾಟೆಕರ್, ಸಂದೀಪ್ ಕಾಂಟೆ, ಸುನೀಲ್ ಸಂಗಮ್ ಹಾಗೂ ರಮೇಶ್ ಪಾಸ್ವಾನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.







