ಲಿವರ್ಪೂಲ್ ವಿಜಯೋತ್ಸವ ವೇಳೆ ಗುಂಪಿನ ಮೇಲೆ ಕಾರು ಹರಿಸಿದ ದುಷ್ಕರ್ಮಿಗಳು: 27 ಮಂದಿಗೆ ಗಾಯ

PC: x.com/IndianSportFan
ಲಿವರ್ಪೂಲ್: ಪ್ರಿಮಿಯರ್ ಲೀಗ್ ಫುಟ್ಬಾಲ್ ಪ್ರಶಸ್ತಿ ಗೆದ್ದ ಲಿವರ್ಪೂಲ್ ತಂಡದ ವಿಜಯೋತ್ಸವ ಮೆರವಣಿಗೆ ವೇಳೆ ಗುಂಪಿನ ಮೇಲೆ ಉದ್ದೇಶಪೂರ್ವಕವಾಗಿ ದುಷ್ಕರ್ಮಿಗಳು ಕಾರು ಹರಿಸಿ ಸಂಭವಿಸಿದ ದುರಂತದಲ್ಲಿ ಕನಿಷ್ಠ 27 ಮಂದಿ ಗಾಯಗೊಂಡಿದ್ದಾರೆ. ಈ ಸಂಬಂಧ 53 ವರ್ಷದ ವ್ಯಕ್ತಿಯೊಬ್ಬನನ್ನು ಬಂಧಿಲಾಗಿದೆ ಎಂದು ಮೆರ್ಸಿಸೈಡ್ ಪೊಲೀಸರು ಹೇಳಿದ್ದಾರೆ. ಇದು ಭಯೋತ್ಪಾದಕ ಕೃತ್ಯವಲ್ಲ ಎಂಧು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
"ಇದು ಪ್ರತ್ಯೇಕ ಘಟನೆ ಎನ್ನುವುದು ನಮ್ಮ ನಂಬಿಕೆ. ಇದರಲ್ಲಿ ಬೇರೆಯವರ ಕೈವಾಡ ಕಾಣಿಸುತ್ತಿಲ್ಲ" ಎಂದು ಮೆರ್ಸಿಸೈಡ್ ಪೊಲೀಸ್ ಸಹಾಯಕ ಮುಖ್ಯಸ್ಥ ಜೆನ್ನಿ ಸಿಮ್ಸ್ ಹೇಳಿದ್ದಾರೆ. ಈ ಘಟನೆಗೂ ಭಯೋತ್ಪಾದನೆಗೂ ಸಂಬಂಧ ಇಲ್ಲ ಎಂದು ಅವರು ವಿವರಿಸಿದರು.
ಸ್ಥಳೀಯ ಕಾಲಮಾನದ ಪ್ರಕಾರ ಸೋಮವಾರ ಸಂಜೆ 6 ಗಂಟೆ ಸುಮಾರಿಗೆ ವಾಟರ್ಸ್ಟ್ರೀಟ್ನಲ್ಲಿ ಈ ಅವಘಡ ಸಂಭವಿಸಿದೆ. ಲಿವರ್ಪೂಲ್ ತಂಡದ ತೆರೆದ ವಾಹನ ಮೆರವಣಿಗೆ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಹಲವು ಮಂದಿ ಸಂತ್ರಸ್ತರನ್ನು ಸ್ಟ್ರೆಚರ್ ಗಳಲ್ಲಿ ಒಯ್ಯಲಾಗಿದೆ. ಗಾಯಗೊಂಡವರ ಸಮಗ್ರ ವಿವರಗಳು ಲಭ್ಯವಾಗಿಲ್ಲ ಎಂದು ಸ್ಥಳದಲ್ಲೇ ಇದ್ದ ಎಎಫ್ಪಿ ಪತ್ರಕರ್ತ ಹೇಳಿದ್ದಾರೆ.
"ಕಾರು ಅತ್ಯಂತ ರಭಸದಿಂದ ನುಗ್ಗಿತು" ಎಂದು ಪತ್ನಿ ಹಾಗೂ ಪುತ್ರಿ ಜತೆ ವಿಜಯೋತ್ಸವ ಪರೇಡ್ ನಲ್ಲಿ ಭಾಗವಹಿಸಿದ್ದ ಹ್ಯಾರಿ ರಶೀದ್ (48) ಹೇಳಿದರು. "ಆರಂಭದಲ್ಲಿ ಕಾರಿನ ಬಾನೆಟ್ ಮೇಲೆ ಜನರು ಬಡಿಯುವ ಸದ್ದು ಕೇಳಿಸಿತು. ಆದರೆ ಕಾರು ಜನಸಮೂಹದ ಮೇಲೆ ನುಗ್ಗಿದ ಭಯಾನಕ ಘಟನೆ ಮತ್ತೆ ಕಂಡುಬಂತು" ಎಂದು ಹೇಳಿದರು.
"ಎಡಕ್ಕೆ ಚಲಿಸಿದ ಕಾರು ಪಾದಚಾರಿ ರಸ್ತೆ ಮೇಲೆ ನುಗ್ಗಿ ನಮ್ಮತ್ತ ಧಾವಿಸಿ ಕಟ್ಟಡಗಳನ್ನೂ ಧ್ವಂಸಗೊಳಿಸಿತು. ನಾವು ದಾರಿ ಮಾಡಿಕೊಡುತ್ತಿದ್ದಂತೆ ಮತ್ತಷ್ಟು ವೇಗವಾಗಿ ಮುನ್ನುಗ್ಗಿತು" ಎಂದು ಪ್ರತ್ಯಕ್ಷದರ್ಶಿ ಮೈಕ್ ಮಡ್ರಾ ವಿವರಿಸಿದ್ದಾರೆ.







