ದೇಶ ಬಲಿಷ್ಠಗೊಳಿಸುವ ಬಗ್ಗೆ ಮುಕ್ತ ಚರ್ಚೆ ಇಂದಿನ ಅಗತ್ಯ : ಪ್ರೊ.ಪುರುಷೋತ್ತಮ ಬಿಳಿಮಲೆ
ಕೊಪ್ಪ: ಪಕ್ಷ, ಭೇದ ಮರೆತು ದೇಶ ಬಲಿಷ್ಠಗೊಳಿಸುವ ಬಗ್ಗೆ ಮುಕ್ತ ಚರ್ಚೆ ಇಂದಿನ ಅಗತ್ಯವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.
ಬೆಂಗಳೂರಿನ ನಮ್ಮ ಧ್ವನಿ ಸಂಸ್ಥೆ ವತಿಯಿಂದ ಪಟ್ಟಣದ ಪುರಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಹೇಂದ್ರ ಕುಮಾರ್ ಕುರಿತ ‘ನಡು ಬಗ್ಗಿಸದ ಎದೆಯ ದನಿ’ ಮತ್ತು ಎಂ.ಜಿ.ಹೆಗಡೆಯ ಆತ್ಮಕತೆ ‘ಚಿಮಣಿ ಬೆಳಕಿನಿಂದ’ ಪುಸ್ತಕಗಳ ಎರಡನೇ ಆವೃತ್ತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಯಾವುದೇ ಧರ್ಮದಲ್ಲಿ ನ್ಯೂನ್ಯತೆಯಿದ್ದಲ್ಲಿ ಅದನ್ನು ಒಪ್ಪಿಕೊಂಡು ಪರಿಷ್ಕರಿಸಿಕೊಳ್ಳಬೇಕು. ಧಾರ್ಮಿಕ ವಿಷಯದ ಮೂಲಕ ಅಧಿಕಾರಗಳಿಕೆಯನ್ನು ತಡೆಯಬೇಕು. ನಾವೆಲ್ಲರೂ ಧರ್ಮ, ಭೇದ ಮರೆತು ಮಾನವೀಯತೆ ಮೆರೆಯಬೇಕೆಂದು ಕರೆ ನೀಡಿದರು.
ಲೇಖಕ ಎಂ.ಜಿ.ಹೆಗಡೆ ಮಾತನಾಡಿ, ನಮಗೆ ಹಿಂದೂ ಎಂಬ ಶ್ರದ್ಧೆಯಿರಬೇಕೇ ವಿನಃ ಗರ್ವ ಇರಬಾರದು. ಧರ್ಮ ಮತ್ತು ವೇದಾಂತದ ಬಗ್ಗೆ ಸ್ಪಷ್ಟ ಜ್ಞಾನವಿಲ್ಲದ ಕಾರಣ ನಾವು ಸಮಸ್ಯೆಯಲ್ಲಿ ಸಿಲುಕಿದ್ದೇವೆ. ದ್ವೇಷ ಬದಿಗಿಟ್ಟು ಮಾನವೀಯತೆ ಮೆರಯಬೇಕಿದೆ ಎಂದು ಕಿವಿಮಾತು ಹೇಳಿದರು.
‘ಚಿಮಣಿ ಬೆಳಕಿನಿಂದ’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಶಾಸಕ ಟಿ.ಡಿ.ರಾಜೇಗೌಡ, ಮಹೇಂದ್ರ ಕುಮಾರ್ ಅವರು ಧರ್ಮದಷ್ಟೇ ಜೀವನವೂ ಮುಖ್ಯ ಎಂದು ಬಹಳ ತಡವಾಗಿ ಅರಿತುಕೊಂಡರು. ಅವರೊಬ್ಬ ಮಲೆನಾಡ ಭಾಗದ ಅದ್ಭುತ ಯುವ ಸಂಘಟಕರಾಗಿದ್ದರು ಎಂದರು.
ವಕೀಲ ಸುಧೀರ್ ಕುಮಾರ್ ಮುರೊಳ್ಳಿ ಮಾತನಾಡಿ, ಹೋರಾಟಗಾರರು ಬೇರೆ ಸಿದ್ಧಾಂತಗಳಿಗೆ ಸ್ಥಿತ್ಯಂತರಗೊಂಡಾಗ ಎದುರಿಸಬೇಕಾದ ಹಲವು ಸಮಸ್ಯೆಗಳನ್ನು ಮಹೇಂದ್ರ ಕುಮಾರ್ ಎದುರಿಸಿದರು. ಆದರೆ, ಎಲ್ಲಿಯೂ ನಂಬಿದ ತತ್ವಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಿಲ್ಲ ಎಂದು ನುಡಿದರು.
ಲೇಖಕ ನವೀನ್ ಸೂರಿಂಜೆ, ಪ್ರಕಾಶಕ ಬಸೂ ಸೂಳೀಬಾವಿ, ಅಕ್ಷತಾ ಹುಂಚದಕಟ್ಟೆ ಮಾತನಾಡಿದರು.
ಶಿರಸಿಯ ಮಹೇಶ್ ನಾಯ್ಕೆ, ಸಚ್ಚಿನ್ ಎತ್ತಿನಮನೆ, ಉದಯ ಮೆಣಸೆ, ಅಬ್ಬಾಸ್ ಕಿಗ್ಗಾ, ಕಣಗೆರೆ ಅಭಿಲಾಷ್, ಕಲ್ಪನಾ ಬೀಜುವಳ್ಳಿ, ಮಂಜುನಾಥ್ ಮತ್ತು ನಮ್ಮ ಧ್ವನಿ ಬಳಗದ ಸದಸ್ಯರು ಉಪಸ್ಥಿತರಿದ್ದರು.
ಆಶಿಸ್ ದೇವಾಡಿಗರ ಸ್ಯಾಕ್ಸೋಫೋನ್ ವಾದಿಸಿದರು. ನಯನಾ ಶೃಂಗೇರಿ ಸ್ವಾಗತಿಸಿದರು. ನವೀನ್ ಮಾವಿನಕಟ್ಟೆ ನಿರೂಪಿಸಿದರೆ, ಸಂತೋಷ್ ಕಾಳ್ಯ ವಂದಿಸಿದರು.