ನಮ್ಮ ನಾಗರಿಕರಿಗೆ ಕಿರುಕುಳ ನೀಡುವುದಿಲ್ಲ ಎಂದು ಚೀನಾ ಖಾತರಿಪಡಿಸಬೇಕು : ಭಾರತ ಆಗ್ರಹ

PC | timesofindia
ಹೊಸದಿಲ್ಲಿ: ಅರುಣಾಚಲ ಪ್ರದೇಶದ ನಿವಾಸಿ ಭಾರತದ ಪ್ರಜೆಯೊಬ್ಬರನ್ನು ಶಾಂಘೈ ವರ್ಗಾಂತರ ವಿಮಾನ ನಿಲ್ದಾಣದಲ್ಲಿ ಕೆಟ್ಟದಾಗಿ ನಡೆಸಿಕೊಳ್ಳಲಾದ ಪ್ರಕರಣದ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಭಾರತೀಯರಿಗೆ ಕಿರುಕುಳ ನೀಡುವುದಿಲ್ಲ ಎಂಬುದಾಗಿ ಚೀನಾ ಖಾತರಿ ನೀಡಬೇಕು ಎಂದು ಆಗ್ರಹಿಸಿದೆ.
ಭಾರತೀಯ ಮಹಿಳೆಯನ್ನು ಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರ ಈಗಾಗಲೇ ಪ್ರಬಲ ಪ್ರತಿಭಟನೆಯನ್ನು ಸಲ್ಲಿಸಿದ್ದು, ಈಶಾನ್ಯ ರಾಜ್ಯ ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ ಎಂಬ ತನ್ನ ನಿಲುವನ್ನು ಪುನರುಚ್ಚರಿಸಿದೆ. ಇದನ್ನು ಚೀನಾ ಎಷ್ಟೇ ನಿರಾಕರಿಸಿದರೂ, ವಾಸ್ತವ ಬದಲಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
"ಚೀನಾ ವಿಮಾನ ನಿಲ್ದಾಣಗಳ ಮೂಲಕ ಹಾದುಹೋಗುವ ಭಾರತೀಯರನ್ನು ಗುರಿ ಮಾಡುವುದಿಲ್ಲ ಅಥವಾ ಬೇಕಾಬಿಟ್ಟಿಯಾಗಿ ಬಂಧಿಸುವುದಿಲ್ಲ ಹಾಗೂ ಕಿರುಕುಳ ನೀಡುವುದಿಲ್ಲ ಎಂಬ ಬಗ್ಗೆ ಚೀನಾ ಅಧಿಕಾರಿಗಳು ಖಾತರಿ ನೀಡಬೇಕು" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಆಗ್ರಹಿಸಿದ್ದಾರೆ.
ಅಂತರರಾಷ್ಟ್ರೀಯ ವಿಮಾನಯಾನಕ್ಕೆ ಸಂಬಂಧಿಸಿದ ನಿಬಂಧನೆಗಳನ್ನು ಚೀನಾ ಗೌರವಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಚೀನಾಕ್ಕೆ ತೆರಳುವ ಅಥವಾ ಚೀನಾ ಮೂಲಕ ಹಾದು ಹೋಗುವ ಮುನ್ನ ಭಾರತೀಯರು ಅಗತ್ಯ ಎಚ್ಚರ ವಹಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಮಹಿಳೆಗೆ ಕಿರುಕುಳ ನೀಡಲಾಗಿದೆ ಎಂಬ ಆರೋಪವನ್ನು ಚೀನಾದ ವಿದೇಶಾಂಗ ಸಚಿವಾಲಯ ಅಲ್ಲಗಳೆದಿದೆ. ದೇಶವನ್ನು ಪ್ರವೇಶಿಸುವವರನ್ನು ಮತ್ತು ನಿರ್ಗಮಿಸವವರನ್ನು ಗಡಿಯಲ್ಲಿ ತಪಾಸಣೆ ಮಾಡುವುದು ಹಾಗೂ ಕಾನೂನು ಜಾರಿ ಕಾರ್ಯವನ್ನು ಮಾಡುವುದು ವಿಶ್ವಾದ್ಯಂತ ಇರುವ ಸಾಮಾನ್ಯ ವಾಡಿಕೆ ಎಂದು ಸಮರ್ಥಿಸಿಕೊಂಡಿದೆ.







