ಡಿ.27ರಂದು ನಶೆ ಮುಕ್ತ ಮಂಗಳೂರು ಅಭಿಯಾನ

ಮಂಗಳೂರು, ಡಿ.9: ಮೇಕ್ ಎ ಚೇಂಜ್ ಫೌಂಡೇಶನ್ ವತಿಯಿಂದ ಮಂಗಳೂರು ನಗರ ಪೊಲೀಸ್ ಸಹಭಾಗಿತ್ವದಲ್ಲಿ ನಶೆ ಮುಕ್ತ ಮಂಗಳೂರು ಅಭಿಯಾನವನ್ನು ಆಯೋಜಿಸಲಾಗಿದೆ.
ಯುವಜನರಲ್ಲಿ ಮಾದಕ ದ್ರವ್ಯಗಳ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಸೃಜನಾತ್ಮಕ ಸಮಾಜ ಕಟ್ಟುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ ಅಭಿಯಾನವನ್ನು ಡಿ. 27ರಂದು ಟಿಎಂಎ ಪೈ ಇಂಟರ್‌ನ್ಯಾಷನಲ್ ಕನ್ವೆನ್ಶನ್ ಸೆಂಟರ್‌ನಲ್ಲಿ ನಡೆಯಲಿದೆ ಎಂದು ಮೇಕ್ ಎ ಚೇಂಜ್ ಫೌಂಡೇಶನ್‌ನ ಸಂಸ್ಥಾಪಕ ಹಾಗೂ ಅಧ್ಯಕ್ಷ ಸುಹೈಲ್ ಕಂದಕ್ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಸ್ಪೀಕರ್ ಯು.ಟಿ.ಖಾದರ್, ಸಂಸದ ಕ್ಯಾ. ಬ್ರಿಜೇಶ್ ಚೌಟ, ದ.ಕ.ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದರು.
ಮಂಗಳೂರು ಬಿಷಪ್, ರಾಮಕೃಷ್ಣ ಮಠ ಸ್ವಾಮೀಜಿ, ಮಂಗಳೂರು ಖಾಝಿ ಸೇರಿದಂತೆ ಹಲವು ಧಾರ್ಮಿಕ ಮುಖಂಡರು ಹಾಗೂ ತುಳುನಾಡಿನ ಖ್ಯಾತ ನಟರು ಅಭಿಯಾನದಲ್ಲಿ ಕೈಜೋಡಿಸಲಿದ್ದಾರೆ ಎಂದವರು ತಿಳಿಸಿದರು.
ಅಭಿಯಾನದ ಪ್ರಯುಕ್ತ ಹಲವು ಸ್ಪರ್ಧೆಗಳು :
ಯುವ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗುತ್ತಿರುವ ಅಭಿಯಾನದ ಪ್ರಯುಕ್ತ ಹಲವು ಸ್ಪರ್ಧೆಗಳನ್ನು ಕೂಡಾ ಆಯೋಜಿಸಲಾಗಿದೆ.
ಯುವ ಕೇಂದ್ರಿತವಾಗಿ 30ರಿಂದ 60 ಸೆಕೆಂಡುಗಳ ರೀಲ್ ಅಥವಾ ಶಾರ್ಟ್ ವೀಡಿಯೋ ತಯಾರಿಸಿ ಮಾದಕ ದ್ರವ್ಯದ ಹಾನಿ ಮತ್ತು ಜಾಗೃತಿ ಸಂದೇಶ ಜನರಿಗೆ ತಲುಪಿಸುವುದು. ಅಂತರ್ ಕಾಲೇಜು ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಮಾದಕ ಮುಕ್ತ ಮಂಗಳೂರಿನ ಮಾದರಿಗಳು ಅಥವಾ ಅವಿಷ್ಕಾರಗಳನ್ನು ಪ್ರದರ್ಶಿಸಲು ಅವಕಾಶ ನೀಡಲಾಗುತ್ತದೆ. ಮಾದಕ ದ್ರವ್ಯದ ತಡೆಗೆ ಹೊಸ ಚಿಂತನೆಯ ಬಗ್ಗೆ ಪ್ರಬಂಧ ಮಂಡನೆ. ನಗರದ ಪ್ರತಿಷ್ಟಿತ ಮಾಲ್‌ಗಳಲ್ಲಿ ಫಿಟ್ನೆಸ್ ಕುರಿತಂತೆ ಕಾರ್ಯಕ್ರಮ. ಸೃಜನಾತ್ಮಕ ಡಿಜಿಟಲ್ ಪೋಸ್ಟರ್ ಮೂಲಕ ಮಾದಕ ಮುಕ್ತ ಜಾಗೃತಿ ಮೂಡಿಸುವುದು. ಕ್ರಿಯೇಟಿವ್ ಕಂಟೆಂಟ್ ಮೂಲಕ ಸಮಾಜಕ್ಕೆ ಇನ್‌ಫ್ಲೂಯೆನ್ಸರ್ ಆಗಿ ಮಾದಕ ಮುಕ್ತ ಸಂದೇಶ ನೀಡುವುದು. ಸಂಗೀತ ಮತ್ತು ನೃತ್ಯದ ಮೂಲಕ ಸಾರ್ವಜನಿಕ ಸ್ಥಳಗಳಲ್ಲಿ ಜಾಗೃತಿ ಮೂಡಿಸುವುದು ಸೇರಿದಂತೆ ಹಲವು ರೀತಿಯ ಸ್ಪರ್ಧೆ ಹಾಗೂ ಜಾಗೃತಿ ಕಾರ್ಯಕ್ರಮಗಳು ನಡೆಯಲಿವೆ ಎಂದು ಅವರು ವಿವರಿಸಿದರು.
ಗೋಷ್ಟಿಯಲ್ಲಿ ಎಸಿಪಿ ರವೀಶ್ ನಾಯಕ್, ಬಾರ್ನ್ ಅಗೇನ್ ರಿಕವರಿ ಸೆಂಟರ್‌ನ ಸಹ ಸ್ಥಾಪಕಿ ಬೀನಾ ಸಲ್ಡಾನ, ಕ್ಯಾಥಲಿಕ್ ಸಭಾ ಮಂಗಳೂರು ಪ್ರದೇಶದ ಅಧ್ಯಕ್ಷ ಆಲ್ವಿನ್ ಡಿಸೋಜಾ, ವಾಯ್ಸ್ ಆಫ್ ಸ್ಟೂಡೆಂಟ್ಸ್‌ನ ಅಧ್ಯಕ್ಷ ಅಭಿಷೇಕ್ ವಾಲ್ಮಿಕಿ, ವಿಕಾಸ್ ಶೆಟ್ಟಿ ಉಪಸ್ಥಿತರಿದ್ದರು.







