Hubballi | ಅಕ್ರಮ ನುಸುಳುಕೋರರ ಶಂಕೆಯಲ್ಲಿ ಕೂಲಿ ಕಾರ್ಮಿಕರ ವಿಚಾರಣೆ; ಶಾಸಕ ಟೆಂಗಿನಕಾಯಿ ವಿರುದ್ಧ ದಲಿತ ಸಂಘಟನೆ ಆಕ್ರೋಶ

ಹುಬ್ಬಳ್ಳಿ: ಬಾಂಗ್ಲಾದೇಶದ ಅಕ್ರಮ ನುಸುಳುಕೋರರು ಎಂದು ಶಂಕೆ ವ್ಯಕ್ತಪಡಿಸಿ ಹುಬ್ಬಳ್ಳಿ ಬಸ್ ನಿಲ್ದಾಣದಲ್ಲಿ ಕೂಲಿ ಕಾರ್ಮಿಕರನ್ನು ವಿಚಾರಣೆ ನಡೆಸಿರುವ ಹುಬ್ಬಳ್ಳಿಯ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ್ ಟೆಂಗಿನಕಾಯಿ ಅವರ ನಡೆ ಖಂಡನೀಯ ಎಂದು ಕಾಂಗ್ರೆಸ್ ಹಾಗೂ ದಲಿತ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಶ್ಚಿಮ ಬಂಗಾಳ, ಬಿಹಾರ ಸೇರಿದಂತೆ ವಿವಿಧ ಭಾಗಗಳಿಂದ ಬಂದು ಬೇರೆ ನಗರಗಳಿಗೆ ತೆರಳುತ್ತಿದ್ದ ಕೂಲಿ ಕಾರ್ಮಿಕರನ್ನು ಬಾಂಗ್ಲಾದೇಶದ ಅಕ್ರಮ ನುಸುಳುಕೋರರು ಎಂದು ಶಂಕೆ ವ್ಯಕ್ತಪಡಿಸಿ ಶಾಸಕ ಮಹೇಶ್ ಟೆಂಗಿನಕಾಯಿ ಹಾಗೂ ಸಂಘ ಪರಿವಾರದ ಕಾರ್ಯಕರ್ತರು ಪೋಲಿಸ್ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಶನಿವಾರ ನಗರದ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರ ನಡುವೆ ನೆಲದ ಮೇಲೆ ಕೂರಿಸಿ, ವಿಚಾರಣೆ ನಡೆಸಿದ್ದರು. ಅಲ್ಲದೆ, ಆಧಾರ್ ಕಾರ್ಡ್ ಹಾಗೂ ವಿವಿಧ ದಾಖಲಾತಿಗಳನ್ನು ಪರಿಶೀಲನೆ ನಡೆಸಿದ್ದರು.
ಈ ಸಂಬಂಧ ‘ವಾರ್ತಾಭಾರತಿ’ ಜೊತೆ ಮಾತನಾಡಿದ ದಲಿತ ಸಂಘಟನೆ ಮುಖಂಡ ಗುರುನಾಥ ಉಳ್ಳಿಕಾಶಿ, ಬಡತನ ರೇಖೆಗಿಂತ ಕೆಳಗಡೆ ಇರುವ ವಿವಿಧ ರಾಜ್ಯಗಳ ಜನರು ಕರ್ನಾಟಕಕ್ಕೆ ಬಂದು ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಕೂಲಿ ಕಾರ್ಮಿಕರ ಮತಗಳಿಂದ ಅಧಿಕಾರಕ್ಕೆ ಬಂದಿರುವ ರಾಜ್ಯ ಸರಕಾರ ಈ ತರಹ ಘಟನೆ ನಡೆದರೂ ಮಾತನಾಡದೇ ಇರುವುದು ಕಾರ್ಮಿಕರಿಗೆ ಮಾಡಿದ ಅವಮಾನ ಆಗಿದೆ ಎಂದು ಟೀಕಿಸಿದ್ದಾರೆ.
ಪೊಲೀಸ್ ಇಲಾಖೆಗೆ ಅಕ್ರಮ ನುಸುಳುಕೋರರು ಎಂಬ ಸಂಶಯ ಬಂದಲ್ಲಿ ಎಲ್ಲರನ್ನೂ ಪೊಲೀಸ್ ಇಲಾಖೆಯ ಠಾಣೆಗೆ ಅಥವಾ ಇಲಾಖೆಯ ಮೈದಾನಕ್ಕೆ ಕರೆದುಕೊಂಡು ಹೋಗಿ ಸಮಗ್ರವಾಗಿ ಮಾಹಿತಿ ಪಡೆಯಬಹುದಾಗಿತ್ತು. ಆದರೆ, ಸಾರ್ವಜನಿಕವಾಗಿ ಎಲ್ಲರ ಎದುರು ಬಡ ಕಾರ್ಮಿಕರನ್ನು ಕಳ್ಳರಂತೆ ವಿಚಾರಣೆ ಮಾಡಿರುವುದು ಖಂಡನೀಯ. ಗೃಹ ಇಲಾಖೆಯೂ ಸಂಘಪರಿವಾರದ ತಾಳಕ್ಕೆ ತಕ್ಕಂತೆ ಕುಣಿದಿದೆ ಎಂದು ಗುರುನಾಥ ಉಳ್ಳಿಕಾಶಿ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಯುವ ನಾಯಕ ರಜತ್ ಉಳ್ಳಾಗಡ್ಡಿಮಠ್ ಮಾತನಾಡಿ, ಶಾಸಕ ಮಹೇಶ್ ಟೆಂಗಿನಕಾಯಿ ಒಬ್ಬ ಜನಪ್ರತಿನಿಧಿಯಾಗಿ ಬಡ ಕಾರ್ಮಿಕರೊಂದಿಗೆ ಈ ರೀತಿ ಅತ್ಯಂತ ಅಸಭ್ಯವಾಗಿ ನಡೆದುಕೊಂಡು, ಕೂಲಿ ಕಾರ್ಮಿಕರ ಮಾನವ ಹಕ್ಕುಗಳನ್ನು ಬಹಿರಂಗವಾಗಿ ಉಲ್ಲಂಘಿಸಿರುವುದು ನಾಚಿಕೆಗೇಡಿನ ಸಂಗತಿ. ಘಟನಾ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು ಕಾನೂನಿನಂತೆ ಕ್ರಮ ಕೈಗೊಳ್ಳುವ ಬದಲು, ಶಾಸಕರ ಅಮಾನವೀಯ ಕೃತ್ಯಕ್ಕೆ ಸಂಪೂರ್ಣವಾಗಿ ಮಣಿದಿದ್ದಾರೆ. ಕೇವಲ ಒಬ್ಬ ಶಾಸಕರನ್ನು ಸಮಾಧಾನಪಡಿಸಲು ಮತ್ತು ಓಲೈಸಲು ಪೊಲೀಸರು ಹರಸಾಹಸ ಪಟ್ಟಿರುವುದು ಇಂದಿನ ಆಡಳಿತ ವ್ಯವಸ್ಥೆಯ ಸಂಪೂರ್ಣ ಅಧಃಪತನಕ್ಕೆ ಕೈಗನ್ನಡಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.
ಭಾರತ ದೇಶದ ಕಾರ್ಮಿಕರನ್ನು ಈ ರೀತಿ ಅತ್ಯಂತ ಕೀಳಾಗಿ ಕಂಡರೆ, ನಾಳೆ ಹುಬ್ಬಳ್ಳಿಯ ಪ್ರಮುಖ ಅಭಿವೃದ್ಧಿ ಕಾರ್ಯಗಳನ್ನು ಮಾಡುವವರು ಯಾರು? ನಮ್ಮ ರಸ್ತೆಗಳನ್ನು ನಿರ್ಮಿಸುವವರು ಯಾರು? ಅಥವಾ ಇಲ್ಲಿನ ಕೈಗಾರಿಕೆಗಳಲ್ಲಿ ಕಠಿಣ ಶ್ರಮ ವಹಿಸಿ ಕೆಲಸ ಮಾಡುವವರು ಯಾರು? ಕೇವಲ ರಾಜಕೀಯ ಲಾಭಕ್ಕಾಗಿ ಬೂಟಾಟಿಕೆಯ ನಾಟಕವಾಡುತ್ತಿರುವ ಶಾಸಕ ಟೆೆಂಗಿನಕಾಯಿ ಹಾಗೂ ಬಿಜೆಪಿ ಕಾರ್ಯಕರ್ತರು ಬಂದು ಈ ಕಠಿಣ ಪರಿಶ್ರಮದ ಕೆಲಸಗಳನ್ನು ಮಾಡುತ್ತಾರೆಯೇ ಎಂದು ರಜತ್ ಉಳ್ಳಾಗಡ್ಡಿಮಠ್ ಪ್ರಶ್ನಿಸಿದರು.
ಶಾಸಕರ ವಿರುದ್ಧ ಕ್ರಮಕ್ಕೆ ಆಗ್ರಹ:
ಬಸ್ ನಿಲ್ದಾಣದಲ್ಲಿ ಮಕ್ಕಳು ಮತ್ತು ಮಹಿಳೆಯರು ಎನ್ನದೆ ಬಡ ಕೂಲಿ ಕಾರ್ಮಿಕರನ್ನು ಸಾರ್ವಜನಿಕವಾಗಿ ಕಳ್ಳರಂತೆ ವಿಚಾರಣೆ ಮಾಡಿ, ಅಕ್ರಮ ನುಸುಳುಕೋರರು ಎಂದು ಪಟ್ಟ ಕಟ್ಟಿ ಅವಮಾನ ಮಾಡಿದ್ದಾರೆ. ಈ ಘಟನೆ ಮಾನವ ಸಮಾಜ ತಲೆ ತಗ್ಗಿಸುವಂತಹದ್ದು. ಈ ಘಟನೆಯನ್ನು ರಾಜ್ಯ ಸರಕಾರ ಗಂಭಿರವಾಗಿ ತೆಗೆದುಕೊಂಡು ಕೂಲಿ ಕಾರ್ಮಿಕರ ಗೌರವ ಕಾಪಾಡಬೇಕು. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರು ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಪೊಲೀಸ್ ಅಧಿಕಾರಿಗಳು ಹಾಗೂ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಕೂಲಿ ಕಾರ್ಮಿಕರ ಪರವಾಗಿ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ದಲಿತ ಸಂಘಟನೆ ಮುಖಂಡ ಗುರುನಾಥ ಉಳ್ಳಿಕಾಶಿ ಎಚ್ಚರಿಕೆ ನೀಡಿದ್ದಾರೆ.
ಕಾರ್ಮಿಕ ವರ್ಗದವರೇ ಈ ನಾಡಿನ ನಿಜವಾದ ನಿರ್ಮಾತೃಗಳು. ತಮ್ಮ ಬೆವರಿನಿಂದ ದೇಶ ಕಟ್ಟುವ ಶ್ರಮಿಕರಾಗಿದ್ದಾರೆ. ಕಾರ್ಮಿಕರ ಗೌರವವನ್ನು ಮಣ್ಣು ಮಾಡುವ ಮತ್ತು ಅವರ ಮೇಲೆ ದಬ್ಬಾಳಿಕೆ ನಡೆಸುವ ಅಧಿಕಾರ ಯಾವದೇ ಶಾಸಕರಿಗೆ ಮತ್ತು ಪೊಲೀಸ್ ಅಧಿಕಾರಿಗಳಿಗೆ ಇರುವುದಿಲ್ಲ. ಈ ಘಟನೆಯಲ್ಲಿ ಭಾಗಿಯಾದವರು ತಕ್ಷಣವೇ ಕೂಲಿ ಕಾರ್ಮಿಕರ ಕ್ಷಮೆ ಕೇಳಬೇಕು.
ರಜತ್ ಉಳ್ಳಾಗಡ್ಡಿಮಠ್, ಕಾಂಗ್ರೆಸ್ ಯುವ ನಾಯಕ






