Dubai | ರಸ್ತೆ ಮಧ್ಯೆ ಕೆಟ್ಟುನಿಂತ ಟ್ರಕ್ ಗೆ ಮಿನಿಬಸ್ ಢಿಕ್ಕಿ : ಹಲವು ಭಾರತೀಯ ಕಾರ್ಮಿಕರು ಮೃತ್ಯು

Photo: x.com/htTweets
ದುಬೈ: ನಗರದಲ್ಲಿ ರಸ್ತೆ ಮಧ್ಯೆ ಕೆಟ್ಟುನಿಂತ ಟ್ರಕ್ ಗೆ ಮಿನಿಬಸ್ ಢಿಕ್ಕಿ ಹೊಡೆದು ಸಂಭವಿಸಿದ ದುರಂತದಲ್ಲಿ ಹಲವು ಮಂದಿ ಭಾರತೀಯ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
"ದುಬೈನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಹಲವು ಮಂದಿ ಭಾರತೀಯ ಕಾರ್ಮಿಕರು ಮೃತಪಟ್ಟ ಘಟನೆಯಿಂದ ತೀವ್ರ ಆಘಾತವಾಗಿದೆ" ಎಂದು ದುಬೈನಲ್ಲಿರುವ ಭಾರತೀಯ ಕಾನ್ಸುಲೇಟ್ ಎಕ್ಸ್ ಪೋಸ್ಟ್ ನಲ್ಲಿ ಹೇಳಿದೆ. ಸಾಧ್ಯವಿರುವ ಎಲ್ಲ ನೆರವು ಒದಗಿಸುವ ನಿಟ್ಟಿನಲ್ಲಿ ಸ್ಥಳೀಯ ಅಧಿಕಾರಿಗಳ ಜತೆ ನಿಕಟ ಸಂಪರ್ಕದಲ್ಲಿ ಇರುವುದಾಗಿ ರಾಯಭಾರ ಕಚೇರಿ ಸ್ಪಷ್ಟಪಡಿಸಿದೆ.
ತಾಂತ್ರಿಕ ದೋಷದಿಂದಾಗಿ ಎಮಿರೇಟ್ಸ್ ರಸ್ತೆಯಲ್ಲಿ ಟ್ರಕ್ ಹಠಾತ್ತನೇ ನಿಂತಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ದುಬೈ ಪೊಲೀಸ್ ಇಲಾಖೆಯ ಸಂಚಾರ ವಿಭಾಗದ ಮಹಾನಿರ್ದೇಶಕ ಬ್ರಿಗೇಡಿಯರ್ ಜುಮಾ ಸಾಲಿಮ್ ಬಿನ್ ಸುವೈದಾನ್ ಹೇಳಿದ್ದಾರೆ.
ಬಸ್ ಚಾಲಕ ಇದನ್ನು ಗಮನಿಸದೇ, ಸಾಕಷ್ಟು ಅಂತರವನ್ನು ಕಾಯ್ದುಕೊಳ್ಳದ ಕಾರಣ ಬಸ್ಸು ಟ್ರಕ್ ಗೆ ಹಿಂಬದಿಯಿಂದ ಅಪ್ಪಳಿಸಿತು. ಘಟನೆಯಲ್ಲಿ ಏಳು ಮಂದಿ ಮೃತಪಟ್ಟಿದ್ದು, ಒಂಬತ್ತು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ ಐವರ ಸ್ಥಿತಿ ಗಂಭಿರವಾಗಿದ್ದು, ಎಲ್ಲ ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವಿವರಿಸಿದ್ದಾರೆ.
ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳಾದ ಭಾರತೀಯರನ್ನು ವಿಚಾರಿಸಿದರು.






