ಬೇಲೂರು | ಸೋಲಾರ್ ಬೇಲಿ ದಾಟಲು ಕಾಫಿ ಗಿಡಗಳನ್ನೇ ಕಿತ್ತೆಸೆದ ಚಾಣಾಕ್ಷ ಕಾಡಾನೆಗಳು!

ಬೇಲೂರು: ತಾಲೂಕಿನ ಅರೇಹಳ್ಳಿ ಹೋಬಳಿ ವ್ಯಾಪ್ತಿಯ ಹೊಸಮನೆ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ರೈತರಲ್ಲಿ ಆತಂಕ ಮೂಡಿಸಿದೆ. ರವಿವಾರ ಬೆಳ್ಳಂಬೆಳಿಗ್ಗೆ ಸುಮಾರು ಐದು ಕಾಡಾನೆಗಳಿದ್ದ ಗುಂಪೊಂದು ಜಮೀನಿನಲ್ಲಿದ್ದ ಸೋಲಾರ್ ವಿದ್ಯುತ್ ತಂತಿ ಬೇಲಿಯನ್ನು ದಾಟಲು ಕಾಫಿ ಗಿಡಗಳನ್ನು ಕಿತ್ತೆಸೆದು ಬೇಲಿಯ ಮೇಲೆ ಹಾಕಿ ದಾಟಿರುವ ಅಪರೂಪದ ಘಟನೆ ನಡೆದಿದೆ.
ಹೊಸಮನೆ ಗ್ರಾಮದ ಶ್ರೀನಿವಾಸ ಅವರಿಗೆ ಸೇರಿದ ಜಮೀನಿನಲ್ಲಿ ಮೂರು ದೊಡ್ಡ ಕಾಡಾನೆಗಳು ಹಾಗೂ ಎರಡು ಮರಿಗಳಿದ್ದ ಗುಂಪು ಕಾಣಿಸಿಕೊಂಡಿತ್ತು. ಪಕ್ಕದ ಜಮೀನಿಗೆ ತೆರಳಲು ಅಡ್ಡಿಯಾಗಿದ್ದ ಸೋಲಾರ್ ವಿದ್ಯುತ್ ತಂತಿ ಬೇಲಿಯನ್ನು ದಾಟಲು ಕಾಡಾನೆಗಳು ತಮ್ಮ ಚಾಣಾಕ್ಷತನ ಪ್ರದರ್ಶಿಸಿದ್ದು, ಜಮೀನಿನಲ್ಲಿದ್ದ ಸುಮಾರು ಐವತ್ತಕ್ಕೂ ಹೆಚ್ಚು ಕಾಫಿ ಗಿಡಗಳು ಹಾಗೂ ಇತರೆ ಸಣ್ಣ ಮರಗಿಡಗಳನ್ನು ಕಿತ್ತು ತಂತಿ ಬೇಲಿಯ ಮೇಲೆ ಹಾಕಿ ನಂತರ ಅದನ್ನು ದಾಟಿ ಮುಂದಕ್ಕೆ ಸಾಗಿವೆ.
ಈ ದೃಶ್ಯವನ್ನು ಕಂಡ ರೈತರು ಮತ್ತು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಕಾಡಾನೆಗಳ ಬುದ್ಧಿವಂತಿಕೆಯ ನಡೆ ಇದೀಗ ಗ್ರಾಮಸ್ಥರಲ್ಲೂ ಚರ್ಚೆಗೆ ಗ್ರಾಸವಾಗಿದೆ.
ಇದೇ ವೇಳೆ ಕಾಡಾನೆಗಳನ್ನು ಓಡಿಸಲು ಮುಂದಾದ ನಾಯಿಯನ್ನು ಕಂಡ ಗುಂಪಿನಲ್ಲಿದ್ದ ಒಂಟಿ ಕಾಡಾನೆಯೊಂದು ರೋಷದಿಂದ ನಾಯಿಯ ಬೆನ್ನಟ್ಟಿದೆ. ಆದರೆ ಅದೃಷ್ಟವಶಾತ್ ಸೋಲಾರ್ ವಿದ್ಯುತ್ ಬೇಲಿಯ ರಕ್ಷಣೆಯಿಂದ ನಾಯಿ ಅಪಾಯದಿಂದ ಪಾರಾಗಿದೆ. ಈ ಘಟನೆ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಕಾಡಾನೆಗಳ ದಾಂಧಲೆ ಯಿಂದ ಭಯಗೊಂಡ ಗ್ರಾಮಸ್ಥರು ತಕ್ಷಣ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಅಧಿಕಾ ರಿಗಳು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿ ಕಾಡಾನೆಗಳನ್ನು ಅರಣ್ಯ ಪ್ರದೇಶದತ್ತ ಹಿಮ್ಮೆಟ್ಟಿಸಿ ದ್ದಾರೆ.
ಇತ್ತೀಚಿನ ದಿನಗಳಲ್ಲಿ ಅರೇಹಳ್ಳಿ ಹಾಗೂ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆ ರೈತರು ರಾತ್ರಿ ವೇಳೆ ಜಮೀನುಗಳಿಗೆ ತೆರಳಲು ಭಯಪಡುವಂತಾಗಿದೆ. ಶಾಶ್ವತ ಪರಿಹಾರ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ.






