ನನ್ನ ಧಾರ್ಮಿಕ ವಿಚಾರದಲ್ಲಿ ಯಾರೇ ಲೆಕ್ಕಚಾರ ಹಾಕಲಿ, ನನಗದರ ಅವಶ್ಯಕತೆ ಇಲ್ಲ: ಡಿಕೆ ಶಿವಕುಮಾರ್
"ಬಿಜೆಪಿಯವರು ಮೊದಲು ಅವರ ಮನೆಯನ್ನು ಸರಿ ಮಾಡಿಕೊಳ್ಳಲಿ"

ಉಡುಪಿ: ನಾನು ಕುಂಭಮೇಳಕ್ಕೆ ಹೋಗಿದ್ದೇನೆ. ಅಲ್ಲಿನ ನೀರಿಗೆ ಜಾತಿ, ಧರ್ಮ ಪಾರ್ಟಿ ಎಂಬುದು ಇಲ್ಲ. ಟಿ.ನರಸೀಪುರದ ಕುಂಭಮೇಳದಲ್ಲೂ ನಾನು ಭಾಗಿಯಾಗಿದ್ದೇನೆ. ಕುಂಭಮೇಳದಲ್ಲಿ ಭಾಗಿ ಆದರೆ ತಪ್ಪೇನಿದೆ. ನನ್ನ ಧಾರ್ಮಿಕ ವಿಚಾರದಲ್ಲಿ ಯಾರು ಯಾವ ಲೆಕ್ಕಚಾರ ಬೇಕಾದರೂ ಹಾಕಿಕೊಳ್ಳಲಿ, ನನಗದರ ಅವಶ್ಯಕತೆ ಇಲ್ಲ ಎಂದು ರಾಜ್ಯ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕಾಪುವಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಯಾವ ದೇವಸ್ಥಾನಕ್ಕೆ ಹೋದರೂ, ಯಾವ ಧಾರ್ಮಿಕ ವಿಚಾರ ಮಾತನಾಡಿದರೂ ಸಂಚಲನವಾಗುತ್ತದೆ. ಯೇಸುವಿನ ಶಿಲಾ ಮೂರ್ತಿಗೆ ನಾನು ಪ್ರೋತ್ಸಾಹ ಕೊಟ್ಟೆ ಎಂಬ ಕಾರಣಕ್ಕೆ ಇದೇ ಜಿಲ್ಲೆಯವರೇ ನನ್ನನ್ನು ಏಸು ಕುಮಾರ ಎಂದು ಕರೆದಿದ್ದರು. ಯಾರೋ ಒಬ್ಬ ಸಂಸದ ಮುಸ್ಲಿಮರ ಎದೆ ಸೀಳಿದರೆ ಮೂರು ಅಕ್ಷರ ಇಲ್ಲ ಎಂದಿದ್ದರು. ಅವರೆಲ್ಲ ನಮ್ಮ ಸಹೋದರರು, ಅವರಿಲ್ಲದೆ ಬದುಕೋಕೆ ಆಗಲ್ಲ ಎಂದಿದ್ದೆ. ಅವರನ್ನು ಸಹೋದರರು ಅಂದದಕ್ಕೆ ನನ್ನನ್ನು ಇನ್ನೊಂದು ಹೆಸರಲ್ಲಿ ಕರೆದರು. ನನಗೆ ಶಿವನ ಮಗ ಶಿವಕುಮಾರ ಎಂದು ತಂದೆ ಹೆಸರಿಟ್ಟರು. ಶಿವನ ದೇವಸ್ಥಾನಕ್ಕೆ ಹೋದರೆ ಅಲ್ಲೂ ಏನೋ ಒಂದು ಕರೆಯುತ್ತಾರೆ ಎಂದರು.
ಡಿಕೆಶಿ ಅವರ ಹಿಂದುತ್ವ ನಿಲುವನ್ನು ಶ್ಲಾಘಿಸಿರುವ ಯಶ್ಪಾಲ್ ಸುವರ್ಣ, ಸ್ವಾಗತ ಕೋರಿರುವ ಸುನಿಲ್ ಕುಮಾರ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅವರಿಗೆ ಒಳ್ಳೆಯದಾಗಲಿ, ರಾಜ್ಯಕ್ಕೆ ಒಳ್ಳೆಯದಾಗಲಿ. ಬಿಜೆಪಿಯವರು ಮೊದಲು ಅವರ ಮನೆಯನ್ನು ಸರಿ ಮಾಡಿಕೊಳ್ಳಲಿ ಎಂದು ಹೇಳಿದರು.
ಬೆಳಗಾವಿ ಗಡಿಯಲ್ಲಿ ಮಹಾರಾಷ್ಟ್ರದಿಂದ ಪ್ರತ್ಯೇಕ ಇಬ್ಬರು ಗಡಿ ಉಸ್ತುವಾರಿ ಸಚಿವರ ನೇಮಕ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ನಮ್ಮಲ್ಲೂ ಗಡಿಯಲ್ಲಿ ಉಸ್ತುವಾರಿ ಸಚಿವರಿದ್ದಾರೆ. ಎಲ್ಲಾ ಗಡಿಯಲ್ಲಿರುವ ಮಂತ್ರಿಗಳೇ ಎಲ್ಲಾ ಕೆಲಸ ನಿಭಾಯಿಸುತ್ತಾರೆ ಎಂದರು.







