ಅಮೆರಿಕ | ಹೋಟೆಲ್ವೊಂದರಲ್ಲಿ ಬಂಧಿಯಾಗಿರುವ ಭಾರತೀಯರು ಸೇರಿದಂತೆ 300 ಅಕ್ರಮ ವಲಸಿಗರು
ಸಹಾಯ ಮಾಡುವಂತೆ ಕಿಟಕಿಯಿಂದಲೇ ಫಲಕಗಳ ಪ್ರದರ್ಶನ

Photo credit: AFP
ಪನಾಮ : ಅಕ್ರಮ ವಲಸಿಗರ ವಿರುದ್ಧ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಠಿಣ ಕ್ರಮ ಘೋಷಿಸಿದ ಬಳಿಕ ಭಾರತೀಯರು ಸೇರಿದಂತೆ ಸುಮಾರು 300 ಅಕ್ರಮ ವಲಸಿಗರನ್ನು ಪ್ರಸ್ತುತ ಪನಾಮದ ಹೋಟೆಲ್ನಲ್ಲಿ ಕೂಡಿ ಹಾಕಲಾಗಿದೆ ಎಂದು ಅಸೋಸಿಯೇಟೆಡ್ ಪ್ರೆಸ್ (Associated Press) ವರದಿ ಮಾಡಿದೆ.
ಭಾರತ, ನೇಪಾಳ, ಶ್ರೀಲಂಕಾ, ಇರಾನ್, ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಚೀನಾ ಸೇರಿದಂತೆ ಏಷ್ಯಾದ 10 ದೇಶಗಳ ವಲಸಿಗರನ್ನು ಕೂಡಿ ಹಾಕಲಾಗಿದೆ ಎಂದು ವರದಿ ತಿಳಿಸಿದೆ. ಬಂಧಿತರು ಪೊಲೀಸ್ ಕಣ್ಗಾವಲಿನಲ್ಲಿದ್ದಾರೆ. ಅಕ್ರಮ ವಲಸಿಗರಿಗೆ ಹೋಟೆಲ್ನಿಂದ ಹೊರಹೋಗುವುದನ್ನು ನಿರ್ಬಂಧಿಸಲಾಗಿದೆ. ಅಮೆರಿಕದ ಪನಾಮ ಸರಕಾರವು ಅಕ್ರಮ ವಲಸಿಗರನ್ನು ಮರಳಿ ಕಳುಹಿಸಲು ಸೂಕ್ತ ವ್ಯವಸ್ಥೆಗಾಗಿ ಎದುರು ನೋಡುತ್ತಿದ್ದಾರೆ ಎಂದು ಹೇಳಲಾಗಿದೆ.
ಕೆಲವು ವಲಸಿಗರು ತಮ್ಮನ್ನು ಕೂಡಿ ಹಾಕಿದ ಹೋಟೆಲ್ನ ಕಿಟಕಿಯಿಂದ ದಯವಿಟ್ಟು ʼನಮಗೆ ಸಹಾಯ ಮಾಡಿʼ , ʼನಾವು ಸುರಕ್ಷಿತವಾಗಿಲ್ಲʼ ಎಂಬ ಸಂದೇಶಗಳನ್ನು ಹೊಂದಿರುವ ಫಲಕಗಳಗಳನ್ನು ಪ್ರದರ್ಶನ ಮಾಡಿದ್ದಾರೆ.
ಪನಾಮದ ಭದ್ರತಾ ಸಚಿವ ಫ್ರಾಂಕ್ ಅಬ್ರೆಗೊ ಈ ಕುರಿತು ಪ್ರತಿಕ್ರಿಯಿಸಿ, ವಲಸಿಗರು ಅವರ ಸ್ವಾತಂತ್ರ್ಯದಿಂದ ವಂಚಿತರಾಗುತ್ತಿಲ್ಲ, ಅವರ ರಕ್ಷಣೆಯ ದೃಷ್ಟಿಯಿಂದ ವಶದಲ್ಲಿರಿಸಲಾಗಿದೆ. ಪನಾಮ ಮತ್ತು ಅಮೆರಿಕ ನಡುವಿನ ವಲಸೆ ಒಪ್ಪಂದದ ಭಾಗವಾಗಿ ಅವರಿಗೆ ವೈದ್ಯಕೀಯ ನೆರವು ಮತ್ತು ಆಹಾರವನ್ನು ನೀಡಲಾಗುತ್ತಿದೆ. ತಮ್ಮ ತಾಯ್ನಾಡಿಗೆ ತೆರಳಲು ಬಯಸದವರನ್ನು ಕೊಲಂಬಿಯಾದ ಪನಾಮದ ಗಡಿಯ ಸಮೀಪವಿರುವ ಡೇರಿಯನ್ ಅರಣ್ಯದಲ್ಲಿರುವ ಆಶ್ರಯ ತಾಣಕ್ಕೆ ವರ್ಗಾಯಿಸಲಾಗುವುದು ಎಂದು ಹೇಳಿದ್ದಾರೆ.







