ಗಾಝಾದಲ್ಲಿ 6 ಒತ್ತೆಯಾಳುಗಳ ಮೃತದೇಹ ಪತ್ತೆ: ವರದಿ
`ಒತ್ತೆಯಾಳುಗಳ ಹತ್ಯೆಗೆ ಹೊಣೆಗಾರರನ್ನು ಸೆರೆಹಿಡಿಯುವವರೆಗೆ ಇಸ್ರೇಲ್ ವಿರಮಿಸುವುದಿಲ್ಲ' - ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು | PC : PTI
ಜೆರುಸಲೇಂ : ದಕ್ಷಿಣ ಗಾಝಾದಲ್ಲಿನ ಸುರಂಗವೊಂದರಲ್ಲಿ 6 ಒತ್ತೆಯಾಳುಗಳ ಮೃತದೇಹವನ್ನು ಪತ್ತೆಹಚ್ಚಲಾಗಿದೆ. ಇಸ್ರೇಲ್ ಪಡೆಗಳು ಸ್ಥಳಕ್ಕೆ ತಲುಪುವುದಕ್ಕೆ ಕೆಲವೇ ಕ್ಷಣಗಳ ಮೊದಲು ಅವರನ್ನು ಹತ್ಯೆ ಮಾಡಿರುವುದು ಸ್ಪಷ್ಟವಾಗಿದೆ ಎಂದು ಇಸ್ರೇಲ್ ಸೇನೆ ರವಿವಾರ ಹೇಳಿದೆ.
ದಕ್ಷಿಣ ಗಾಝಾದ ರಫಾ ನಗರದ ಸುರಂಗವೊಂದರಲ್ಲಿ ಇಸ್ರೇಲಿ-ಅಮೆರಿಕನ್ ಪ್ರಜೆ ಹೆರ್ಷ್ ಗೋಲ್ಡನ್ಬರ್ಗ್-ಪೊಲಿನ್ ಸೇರಿದಂತೆ 6 ಒತ್ತೆಯಾಳುಗಳ ಮೃತದೇಹ ಪತ್ತೆಯಾಗಿದೆ.
`ಒತ್ತೆಯಾಳುಗಳ ಹತ್ಯೆಗೆ ಹೊಣೆಗಾರರನ್ನು ಸೆರೆಹಿಡಿಯುವವರೆಗೆ ಇಸ್ರೇಲ್ ವಿರಮಿಸುವುದಿಲ್ಲ. ಒತ್ತೆಯಾಳುಗಳನ್ನು ಕೊಲ್ಲುವವರು ಕದನ ವಿರಾಮ ಒಪ್ಪಂದವನ್ನು ಬಯಸುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ' ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
ಗಾಝಾ ಸುರಂಗದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ 6 ಒತ್ತೆಯಾಳುಗಳಲ್ಲಿ ಕೆಲವರು ಕದನ ವಿರಾಮ ಒಪ್ಪಂದ ಏರ್ಪಟ್ಟರೆ ಬಿಡುಗಡೆಗೊಳ್ಳಲಿದ್ದ ಒತ್ತೆಯಾಳುಗಳ ಪಟ್ಟಿಯಲ್ಲಿ ಸೇರಿದ್ದರು. ಒತ್ತೆಯಾಳುಗಳ ಹತ್ಯೆಗೆ ಇಸ್ರೇಲ್ ಪ್ರಧಾನಿ ನೆತನ್ಯಾಹು ಹೊಣೆ. ಇಸ್ರೇಲ್ ನೆತನ್ಯಾಹು ಅಥವಾ ಒಪ್ಪಂದ ಇವೆರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು' ಎಂದು ಹಮಾಸ್ನ ಹಿರಿಯ ಅಧಿಕಾರಿ ಸಮಿ ಅಬು ಝುಹ್ರಿಯನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.