ಇರಾನ್ ನಲ್ಲಿ ಒಂದೇ ದಿನದಲ್ಲಿ 29 ಮಂದಿಗೆ ಗಲ್ಲು | ಮಾನವಹಕ್ಕು ಸಂಘಟನೆಗಳಿಂದ ತೀವ್ರ ಖಂಡನ
ಸಾಂದರ್ಭಿಕ ಚಿತ್ರ
ಕೋಪನ್ಹೇಗನ್ : ಒಂದೇ ದಿನದಲ್ಲಿ ಇರಾನ್ನಲ್ಲಿ 29 ದೋಷಿಗಳನ್ನು ಗಲ್ಲಿಗೇರಿಸಲಾಗಿದೆ. ಇವರ ಪೈಕಿ 26 ಮಂದಿಯನ್ನು ಒಂದೇ ಕಾರಾಗೃಹದಲ್ಲಿ ಸಾಮೂಹಿಕವಾಗಿ ನೇಣುಹಾಕಲಾಗಿದೆ ಎಂದು ನಾರ್ವೆ ಮೂಲದ ‘ಇರಾನ್ ಮಾನವಹಕ್ಕುಗಳ ಸಂಘಟನೆ’ ಗುರುವಾರ ಆಪಾದಿಸಿದೆ.
ಅಮೆರಿಕ ಮೂಲದ ಹ್ಯೂಮನ್ ರೈಟ್ಸ್ ಆ್ಯಕ್ಞಿವಿಸ್ಟ್ಸ್ ನ್ಯೂಸ್ ಏಜೆನ್ಸಿ (ಎಚ್ಆರ್ಎಎನ್ಎ) ಹಾಗೂ ಸೆಂಟರ್ ಫಾರ್ ಹ್ಯೂಮನ್ ರೈಟ್ಸ್ ಇನ್ ಇರಾನ್ (ಸಿಎಚ್ಆರ್ಐ) ಸೇರಿದಂತೆ ವಿವಿಧ ಮಾನವಹಕ್ಕು ಸಂಘಟನೆಗಳು ಕೂಡಾ ಇದನ್ನು ದೃಢಪಡಿಸಿವೆ
ಟೆಹರಾನ್ ನ ಹೊರವಲಯದಲ್ಲಿರುವ ಕರಾಜ್ ನ ಘೆಝೆಲ್ಹೆಸಾರ್ ಜೈಲಿನಲ್ಲಿ 26 ಮಂದಿಯನ್ನು ಗಲ್ಲಿಗೇರಿಸಲಾಗಿದ್ದು, ಉಳಿದ ಮೂವರನ್ನು ಕರಾಜ್ ನ ನಗರ ಕಾರಾಗೃಹದಲ್ಲಿ ನೇಣುಹಾಕಲಾಗಿದೆಯೆಂದು ‘ಇರಾನ್ ಹ್ಯೂಮನ್ ರೈಟ್ಸ್’ ತಿಳಿಸಿದೆ.
ಚೀನಾ ಹೊರತುಪಡಿಸಿದರೆ ವಾರ್ಷಿಕವಾಗಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಗಲ್ಲಿಗೇರಿಸುವ ದೇಶ ಇರಾನ್ ಆಗಿದೆಯೆಂದು ಮಾನವಹಕ್ಕು ಸಂಘಟನೆಗಳು ಆಪಾದಿಸುತ್ತಲೇ ಇವೆ. 2022ರಲ್ಲಿ ಭುಗಿಲೆದ್ದ ಪ್ರತಿಭಟನೆಯ ಬಳಿಕ ಜನತೆಯಲ್ಲಿ ಭಯ ಹರಡಲು ಮರಣದಂಡನೆಯನ್ನು ಅಸ್ತ್ರವಾಗಿ ಇರಾನ್ ಆಡಳಿತ ಬಳಸಿಕೊಳ್ಳುತ್ತಿದೆಯೆಂದು ಅವು ಆಪಾದಿಸಿವೆ.
ಅಂತಾರಾಷ್ಟ್ರೀಯ ಸಮುದಾಯದಿಂದ ತಕ್ಷಣವೇ ಪ್ರತಿಕ್ರಿಯೆ ಬಾರದೇ ಹೋದಲ್ಲಿ ಮುಂಬರುವ ತಿಂಗಳುಗಳಲ್ಲಿ ನೂರಾರು ಮಂದಿ ಇರಾನ್ ಆಡಳಿತದ ಕೊಲ್ಲುವ ಯಂತ್ರಕ್ಕೆ ಬಲಿಪಶುಗಳಾಗಲಿದ್ದಾರೆಂದು ಇರಾನ್ ಮಾನವಹಕ್ಕುಗಳ ಸಂಘಟನೆ (ಐಎಚ್ಆರ್)ನ ನಿರ್ದೇಶ ಮಹಮೂದ್ ಆಮಿರಿ ಮೋಘಾದ್ದಾಂ ತಿಳಿಸಿದ್ದಾರೆ.
2022ರಲ್ಲಿ ಕುರ್ದ್ ಮ ಹಿಳೆ ಮಹ್ಸಾ ಅಮಿನಿಯ ಸಾವಿನ ಆನಂತರ ಭುಗಿಲೆದ್ದ ಪ್ತತಿಭಟನೆಗೆ ಸಂಬಂಧಿಸಿ ಬಂಧಿತನಾಗಿದ್ದ 30ರ ಹರೆಯದ ಗುಲಾಂರೆಝಾ ರಸಾಯೆನನ್ನು ಮಂಗಳವಾರ ಗಲ್ಲಿಗೇರಿಸಿದ ಮರು ದಿನವೇ ಈ 29 ಮಂದಿಯನ್ನು ನೇಣುಹಾಕಲಾಗಿದೆ. ಇರಾನ್ ರೆವೆಲ್ಯೂಶನರಿ ಗಾರ್ಡ್ಸ್ನ ಕರ್ನಲ್ ಒಬ್ಬರನ್ನು ಹತ್ಯೆಗೈದ ಆರೋಪದಲ್ಲಿ ಗುಲಾಂ ರೆಝಾನನ್ನು ಬಂಧಿಸಲಾಗಿತ್ತು. ಗುಲಾಂ ರೆಝಾನನ್ನು ಗಲ್ಲಿಗೇರಿಸಿರುವುದಕ್ಕೆ ಅಂತಾರಾಷ್ಟ್ರೀಯ ಸಮುದಾಯದಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.