ಅಮೆರಿಕ | ಇರಾನ್ ಜೊತೆಗಿನ ಸಂಧಾನ ಮಾತುಕತೆ ವೇಳೆ ಶ್ವೇತಭವನದ ಹೊರಗೆ ಗುಂಡಿನ ಸದ್ದು

Photo: x.com/BenjAlvarez1
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರವಿವಾರ ಶ್ವೇತಭವನದಲ್ಲಿ ಇರಾನ್ ಜೊತೆಗಿನ ಸಂಧಾನ ಮಾತುಕತೆಗಳ ಬಗ್ಗೆ ಚರ್ಚಿಸುತ್ತಿದ್ದ ವೇಳೆ ಶ್ವೇತಭವನದ ಹೊರಗೆ ಹಲವು ಬಾರಿ ಗುಂಡಿನ ಸದ್ದು ಕೇಳಿಬಂದಿದೆ. ಪೊಲೀಸರು ಹಾಗೂ ಫೆಡರಲ್ ಏಜೆಂಟರು ಅಧ್ಯಕ್ಷೀಯ ಕಚೇರಿಯ ಸುತ್ತ ಬಿಗಿ ಭದ್ರತೆ ಆಯೋಜಿಸಿದ್ದಾರೆ.
ಅಮೆರಿಕದ ಸೀಕ್ರೆಟ್ ಸರ್ವೀಸ್ ಸೆಕ್ಯುರಿಟಿ ಬೂತ್ನಲ್ಲಿ ಶಂಕಿತ ವ್ಯಕ್ತಿಯೊಬ್ಬ ಗುಂಡು ಹಾರಿಸಿದ್ದು, 10 ರಿಂದ 20 ಸುತ್ತು ಗುಂಡು ಹಾರಿಸಲಾಗಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ಸಿಬಿಎಸ್ ನ್ಯೂಸ್ ವರದಿ ಮಾಡಿದೆ.
ರಹಸ್ಯ ಸೇವೆಗಳ ಸಿಬ್ಬಂದಿ ನಡೆಸಿದ ಪ್ರತಿದಾಳಿಯಲ್ಲಿ ಶಂಕಿತ ವ್ಯಕ್ತಿ ಹಾಗೂ ಪಕ್ಕದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ. ಆದರೆ ರಹಸ್ಯ ಸೇವೆಗಳ ವಿಭಾಗದ ಅಧಿಕಾರಿಗಳಿಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ.
"ಶ್ವೇತಭವನದ ಮೈದಾನದ ಬಳಿ ಗುಂಡಿನ ದಾಳಿ ನಡೆದ ಸ್ಥಳಕ್ಕೆ ಎಫ್ಬಿಐ ಧಾವಿಸಿದೆ. ರಹಸ್ಯ ಸೇವೆಗಳ ವಿಭಾಗ ಕೂಡಾ ಗುಂಡಿನ ದಾಳಿಗೆ ಸೂಕ್ತವಾಗಿ ಪ್ರತಿಕ್ರಿಯಿಸಿದೆ" ಎಂದು ಎಫ್ಬಿಐ ನಿರ್ದೇಶಕ ಕಾಶ್ ಪಟೇಲ್ ಹೇಳಿದ್ದಾರೆ. "ನಾನು ಓವಲ್ ಆಫೀಸ್ನಲ್ಲಿದ್ದು, ಶೀಘ್ರದಲ್ಲೇ ಇರಾನ್ ಜತೆಗಿನ ಅಂತಿಮ ಒಪ್ಪಂದವನ್ನು ಘೋಷಿಸಲಾಗುವುದು" ಎಂದು ಟ್ರಂಪ್ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಸ್ವಲ್ಪ ಹೊತ್ತಿನಲ್ಲೇ ಈ ಘಟನೆ ಸಂಭವಿಸಿದೆ.






