ಬಾಂಗ್ಲಾದೇಶ: ಶೇಖ್ ಹಸೀನಾ, ಕುಟುಂಬಕ್ಕೆ ನೀಡಿದ್ದ ವಿಶೇಷ ಭದ್ರತೆ ರದ್ದು
ಶೇಖ್ ಹಸೀನಾ | PC : PTI
ಢಾಕಾ: ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಹಾಗೂ ಅವರ ನಿಕಟ ಸಂಬಂದಿಗಳಿಗೆ ಒದಗಿಸಲಾಗಿದ್ದ ವಿಶೇಷ ಭದ್ರತೆಯನ್ನು ಬಾಂಗ್ಲಾದೇಶದ ಮಧ್ಯಂತರ ಸರಕಾರ ಹಿಂಪಡೆದಿದೆ.
ವಿಶೇಷ ಭದ್ರತಾ ಪಡೆ ಕಾಯ್ದೆ 2021ಕ್ಕೆ ತಿದ್ದುಪಡಿ ತಂದು ಮಾಜಿ ಪ್ರಧಾನಿ ಹಸೀನಾ ಹಾಗೂ ಅವರ ನಿಕಟವರ್ತಿಗಳ ವಿಶೇಷ ಭದ್ರತೆಯನ್ನು ರದ್ದುಗೊಳಿಸಲು ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ನೇತೃತ್ವದ ಸಲಹಾ ಸಮಿತಿ ನಿರ್ಧರಿಸಿದೆ ಎಂದು ಬಿಎಸ್ಎಸ್ ಸುದ್ದಿಸಂಸ್ಥೆ ವರದಿ ಮಾಡಿದೆ. ಈ ಕಾಯ್ದೆಯನ್ನು ಹಿಂದಿನ ಸರಕಾರದ ನಿರ್ಧಾರದಂತೆ ಜಾರಿಗೊಳಿಸಿದ್ದು ಒಂದು ಕುಟುಂಬಕ್ಕೆ ಮಾತ್ರ ವಿಶೇಷ ಭದ್ರತೆ ಮತ್ತು ಸೌಲಭ್ಯ ಒದಗಿಸುವ ಉದ್ದೇಶ ಹೊಂದಿದ್ದು ಇದು ಸ್ಪಷ್ಟವಾಗಿ ತಾರತಮ್ಯದ ನಿರ್ಧಾರವಾಗಿದೆ. ಎಲ್ಲಾ ರೀತಿಯ ತಾರತಮ್ಯವನ್ನು ತೊಡೆದು ಹಾಕಲು ದೃಢವಾಗಿ ಬದ್ಧವಾಗಿದೆ. ಬದಲಾದ ಪರಿಸ್ಥಿತಿಯಲ್ಲಿ ಅಸ್ತಿತ್ವದಲ್ಲಿರುವ ಕಾನೂನಿಗೆ ಅನುಗುಣವಾಗಿ ರಾಷ್ಟ್ರಪಿತ ಶೇಖ್ ಮುಜಿಬುರ್ ರೆಹ್ಮಾನ್ ಅವರ ಕುಟುಂಬಕ್ಕೆ ಸಂಬಂಧಿಸಿದ ನಿಬಂಧನೆಗಳನ್ನು ಆಡಳಿತಾತ್ಮಕ ನಿರ್ವಹಣೆಯ ಅಡಿಯಲ್ಲಿ ಕಾರ್ಯಗತಗೊಳಿಸಲು ಸಾಧ್ಯವಿಲ್ಲ ಎಂದು ಮಧ್ಯಂತರ ಸರಕಾರದ ಹೇಳಿಕೆ ತಿಳಿಸಿದೆ.
ಮಧ್ಯಂತರ ಸರಕಾರವು ತಾರತಮ್ಯ ವಿರೋಧಿ ಚಳವಳಿಯ ಫಲಿತಾಂಶವಾಗಿದೆ ಎಂದು ಸಭೆಯ ಬಳಿಕ ಸುದ್ದಿಗೋಷ್ಟಿಯಲ್ಲಿ ಸಲಹಾ ಸಮಿತಿ ಸದಸ್ಯೆ ಸಯೀದಾ ರಿಝ್ವಾನಾ ಹಸನ್ ಹೇಳಿದ್ದಾರೆ.