ತೀವ್ರವಾಗಿ ಗಾಯಗೊಂಡಿರುವ ಎಲ್‍ಇಟಿ ಸಹ ಸಂಸ್ಥಾಪಕ ಅಮೀರ್ ಹಮಾಝ್ ಆಸ್ಪತ್ರೆಗೆ ದಾಖಲು

ಲಾಹೋರ್: ಲಷ್ಕರ್ ಎ ತೋಯ್ಬಾ ಭಯೋತ್ಪಾದಕ ಸಂಘಟನೆಯ ಸಹ ಸಂಸ್ಥಾಪಕ ಅಮೀರ್ ಹಮಾಝ್ ದಿಢೀರನೇ ಲಾಹೋರ್ ಆಸ್ಪತ್ರೆಗೆ ದಾಖಲಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಲಷ್ಕರ್‍ನ ನಿಯತಕಾಲಿಕದ ಸಂಪಾದಕನೂ ಆಗಿರುವ ಅಮೀರ್ ಮನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದು, ಐಎಸ್‍ಐ ಭದ್ರತಾ ವ್ಯವಸ್ಥೆಯೊಂದಿಗೆ ಲಾಹೋರ್ ಮಿಲಿಟರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ ಎಂಬ ಮಾಹಿತಿಗಳು ಲಭ್ಯವಾಗಿವೆ. ಲಷ್ಕರ್ ಸಂಘಟನೆಯ ಹಿರಿಯ ಮುಖಂಡ ಹಾಗೂ ನೇಮಕಾತಿ ಮಾಡುತ್ತಿದ್ದ ಅಬು ಸಫಿಯುದ್ದೀನ್ ಪಾಕಿಸ್ತಾನದಲ್ಲಿ ಅಪರಿಚಿತ ಬಂದೂಕುಧಾರಿಗಳ ದಾಳಿಗೆ ಬಲಿಯಾದ ಬೆನ್ನಲ್ಲೇ ಹಮಾಝ್ ದಾಖಲಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಜನತೆ ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಶಾಂತರಾಗಿರಬೇಕು ಎಂದು ಲಷ್ಕರ್ ಪರ ಟೆಲಿಗ್ರಾಂ ಚಾನಲ್‍ಗಳು ಮನವಿ ಮಾಡಿದ್ದು, ಹಮಾಝ್‍ಗೆ ಅಪಘಾತದಿಂದ ಗಾಯವಾಗಿದೆ ಎಂದು ಸಮುಜಾಯಿಷಿ ನೀಡಿದೆ.
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಗುಜ್ರನ್‍ವಾಲಾ ಮೂಲದ ಹಮಾಝ್ ನನ್ನು ಅಮೆರಿಕ 2022ರ ಆಗಸ್ಟ್ ನಲ್ಲಿ ಜಾಗತಿಕ ಭಯೋತ್ಪಾದಕ ಎಂದು ಘೋಷಣೆ ಮಾಡಿತ್ತು. ಈತನ ಚಿಂತನೆಗಳನ್ನು ಅಫ್ಘಾನ್ ಮುಜಾಹಿದ್ದೀನ್ ಎಂದು ಬಣ್ಣಿಸಲಾಗಿದ್ದು, ವಿಶ್ವಸಂಸ್ಥೆ ಭಯೋತ್ಪಾದಕರೆಂದು ಘೋಷಿಸಿದ ಹಫೀಜ್ ಸಯೀದ್ ಮತ್ತು ಅಬ್ದುಲ್ ರಹಮಾನ್ ಮಕ್ಕಿ ಅವರಿಗೆ ಈತ ಅತ್ಯಂತ ಆಪ್ತನಾಗಿದ್ದ. ಜಿಹಾದಿ ಸಂಘಟನೆಯ ಕೇಂದ್ರೀಯ ಸಮಿತಿಗೆ ಹಮಾಝ್ ನೇಮಕಗೊಂಡಿದ್ದ.
ಲಷ್ಕರ್ ಪ್ರಚಾರ ವಿಭಾಗ ನಿಭಾಯಿಸುವ ಮುನ್ನ ಹಮಾಝ್ ಭಾರತದಲ್ಲಿ 2000ನೇ ಇಸ್ವಿ ವೇಳೆಗೆ ಸಕ್ರಿಯ ಭಯೋತ್ಪಾದಕನಾಗಿದ್ದ. ಬೆಂಗಳೂರಿನ ಐಐಎಸ್ಸಿ ಮೇಲೆ 2005ರಲ್ಲಿ ನಡೆದ ದಾಳಿಯಲ್ಲಿ ಈತ ಹಾಗೂ ಸೈಫುಲ್ಲಾ ಷಾಮೀಲಾಗಿದ್ದರು.







