100ನೇ ಜನ್ಮದಿನ ಆಚರಿಸಿಕೊಂಡ ಅಮೆರಿಕ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್
PC: x.com/PopBase
ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್ ತಮ್ಮ 100ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದು, ಅಮೆರಿಕದ ಇತಿಹಾಸದಲ್ಲಿ ಮೊಟ್ಟಮೊದಲ ಶತಾಯುಷಿ ಅಧ್ಯಕ್ಷ ಎನಿಸಿಕೊಂಡಿದ್ದಾರೆ. ನೆಲಗಡಲೆ ಬೆಳೆಯುವ ಹೊಲದಿಂದ ಶ್ವೇತಭವನವನ್ನು ಪ್ರವೇಶಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದ ಕಾರ್ಟರ್ ಒಂದು ಅವಧಿಗೆ ಅಮೆರಿಕವನ್ನು ಮುನ್ನಡೆಸಿದ್ದರು.
ಪ್ಲೈನ್ಸ್, ಜಾರ್ಜಿಯಾ ಮತ್ತಿತರ ಕಡೆಗಳಲ್ಲಿ 19 ತಿಂಗಳ ಹಿಂದೆಯೇ ಮನೆಯಲ್ಲೇ ವೈದ್ಯಕೀಯ ಸೇವೆಯನ್ನು ಪಡೆಯುತ್ತಿರುವ ಕಾರ್ಟರ್ ಅವರ ಧೀರ್ಘಾಯುಷ್ಯ ಎಲ್ಲ ನಿರೀಕ್ಷೆಗಳನ್ನೂ ಹುಸಿಯಾಗಿಸಿದೆ.
ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಳ್ಳದಿರುವ ಡೆಮಾಕ್ರಟಿಕ್ ಪಕ್ಷದ ಮಾಜಿ ಅಧ್ಯಕ್ಷ, ಪತ್ನಿ ದಿವಂಗತ ರೋಸ್ಲಿನ್ ಪ್ಲೈನ್ಸ್ ನಲ್ಲಿ 1960ರ ದಶಕದಲ್ಲಿ ಕಟ್ಟಿಸಿದ ಮನೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡರು. ತಮ್ಮ ವಿಸ್ತರಿತ ಕುಟುಂಬದ 20 ಮಂದಿಗೆ ಔತಣಕೂಟ ಏರ್ಪಡಿಸುವ ಮೂಲಕ ಸಂಭ್ರಮಾಚರಿಸಿಕೊಂಡರು ಎಂದು ಅಟ್ಲಾಂಟಾ ಜರ್ನಲ್ ಕಾನ್ಸ್ಟಿಟ್ಯೂಷನ್ ವರದಿ ಮಾಡಿದೆ.
ಕಾರ್ಟರ್ ಅವರನ್ನು "ಆದರಣೀಯ ಸ್ನೇಹಿತ" ಎಂದು ಎಕ್ಸ್ ಪೋಸ್ಟ್ನಲ್ಲಿ ಬಣ್ಣಿಸಿರುವ ಅಧ್ಯಕ್ಷ ಜೋ ಬೈಡನ್, ಅಮೆರಿಕದ ಇತಿಹಾಸದಲ್ಲೇ ಅತ್ಯಂತ ಪ್ರಭಾವಿ ಮುತ್ಸದ್ಧಿ ಎಂದು ಗುಣಗಾನ ಮಾಡಿದ್ದಾರೆ.
ಶ್ವೇತಭವನದ ಹುಲ್ಲುಹಾಸನ್ನು "ಹ್ಯಾಪಿ ಬರ್ತ್ಡೇ ಪ್ರೆಸಿಡೆಂಟ್ ಕಾರ್ಟರ್" ಎಂಬ ಸಂಕೇತದೊಂದಿಗೆ ವಿಶೇಷವಾಗಿ ಅಲಂಕರಿಸಲಾಗಿತ್ತು.