ಗಾಝಾ: ಇಸ್ರೇಲ್ ವಾಯುದಾಳಿಗಳಲ್ಲಿ ಕನಿಷ್ಠ 28 ಬಲಿ
ಮೃತರಲ್ಲಿ ಮಕ್ಕಳು, ಮಹಿಳೆಯರೇ ಅಧಿಕ

ಸಾಂದರ್ಭಿಕ ಚಿತ್ರ | PC : aljazeera.com
ಗಾಝಾ ನಗರ: ಗಾಝಾ ಪಟ್ಟಿಯುದ್ದಕ್ಕೂ ಇಸ್ರೇಲ್ ಸೇನೆ ಗುರುವಾರ ನಡೆಸಿದ ವಾಯುದಾಳಿಗಳಲ್ಲಿ ಕನಿಷ್ಠ 28 ಮಂದಿ ಸಾವನ್ನಪ್ಪಿದ್ದಾರೆ. ಮೃತಪಟ್ಟವರಲ್ಲಿ ಹೆಚ್ಚಿನವರು ಮಹಿಳೆಯರು ಹಾಗೂ ಮಕ್ಕಳೆಂದು ಗಾಝಾದ ಆರೋಗ್ಯ ಸಚಿವಾಲಯ ತಿಳಿಸಿದೆ.
ಉತ್ತರ ಜಬಾಲಿಯಾ ಪ್ರದೇಶದಲ್ಲಿ ಪೊಲೀಸ್ ಠಾಣೆಯೊಂದರ ಮೇಲೆ ನಡೆಸಿದ ದಾಳಿಯಲ್ಲಿ ಕನಿಷ್ಠ 9 ಮಂದಿ ಸಾವನ್ನಪ್ಪಿದ್ದಾರೆಂದು ಅದು ಹೇಳಿದೆ. ಹಮಾಸ್ ಹಾಗೂ ಇನ್ನೊಂದು ಸಂಘಟನೆಯ ಕಮಾಂಡ್ ಹಾಗೂ ನಿಯಂತ್ರಣ ಕೇಂದ್ರವನ್ನು ಗುರಿಯಿರಿಸಿ ದಾಳಿ ನಡೆಸಿರುವುದಾಗಿ ಇಸ್ರೇಲಿ ಸೇನೆ ತಿಳಿಸಿದೆ. ಈ ಕಟ್ಟಡವನ್ನು ಫೆಲೆಸ್ತೀನ್ ಹೋರಾಟಗಾರರು ಇಸ್ರೇಲಿ ನಾಗರಿಕರು ಹಾಗೂ ಇಸ್ರೇಲಿ ಪಡೆಗಳ ವಿರುದ್ಧ ದಾಳಿಗೆ ಸಂಚು ರೂಪಿಸಲು ಹಾಗೂ ಅದನ್ನು ಕಾರ್ಯಗತಗೊಳಿಸಲು ಬಳಸಲಾಗುತ್ತಿತ್ತೆಂದು ಇಸ್ರೇಲ್ ಆಪಾದಿಸಿದೆ.
ಉತ್ತರ ಗಾಝಾ ನಗರದಲ್ಲಿರುವ ಮನೆಯೊಂದರ ಮೇಲೆ ಇಸ್ರೇಲ್ ಸೇನೆ ನಡೆಸಿದ ವಾಯುದಾಳಿಯಲ್ಲಿ ಓರ್ವ ದಂಪತಿ ಹಾಗೂ ನಾಲ್ವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಆರು ಮಂದಿ ಸದಸ್ಯರು ಸಾವನ್ನಪ್ಪಿದ್ದಾರೆಂದು ನಾಗರಿಕ ರಕ್ಷಣಾ ಇಲಾಖೆ ತಿಳಿಸಿದೆ.
ಉತ್ತರ ಗಾಝಾದ ಜಬಾಲಿಯಾ ಪ್ರದೇಶದಲ್ಲಿ ಹಿಂದೆ ಪೊಲೀಸ್ ಠಾಣೆಯಾಗಿ ಕಾರ್ಯಾಚರಿಸುತ್ತಿದ್ದ ಕಟ್ಟಡವೊಂದರ ಮೇಲೆ ನಡೆದ ದಾಳಿಯಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ ಹಾಗೂ ಹಲವಾರು ಮಂದಿ ಗಾಯಗೊಂಡಿದ್ದಾರೆ.
ಝುವಾಯಿದಾ ಪಟ್ಟಣ, ಖಾನ್ ಯೂನಿಸ್ಗಳಲ್ಲಿ ಇಸ್ರೇಲ್ ನ ವಾಯುದಾಳಿಗೆ ಮಗು ಸೇರಿದಂತೆ ಒಟ್ಟು ಐದು ಮಂದಿ ಸಾವನ್ನಪ್ಪಿದ್ದಾರೆ.







