ಗಾಝಾಪಟ್ಟಿಯ ಹಮಾಸ್ ನೆಲೆಗಳ ಮೇಲೆ ಇಸ್ರೇಲ್ ದಾಳಿ; 33 ಮಂದಿ ಮೃತ್ಯು

PC: x.com/theworldtruthe
ಗಾಝಾ: ಗಾಝಾಪಟ್ಟಿಯಲ್ಲಿ ಹಮಾಸ್ ಕದನ ವಿರಾಮ ಉಲ್ಲಂಘಿಸಿದೆ ಎಂದು ಆಪಾದಿಸಿದ ಇಸ್ರೇಲ್, ಹಮಾಸ್ ಹೋರಾಟಗಾರರ ಹಲವು ನೆಲೆಗಳ ಮೇಲೆ ಮಿಂಚಿನ ದಾಳಿ ನಡೆಸಿದೆ. ಇಸ್ರೇಲ್ ದಾಳಿಯಲ್ಲಿ ಕನಿಷ್ಠ 33 ಮಂದಿ ಮೃತಪಟ್ಟಿದ್ದು, ಈ ದಾಳಿಯ ಬಳಿಕ ಕದನ ವಿರಾಮ ಜಾರಿಗೆ ಬಂದಿದೆ ಎಂದು ಇಸ್ರೇಲ್ ಘೋಷಿಸಿದೆ.
ವಾಯುಪಡೆಯ ಯುದ್ಧವಿಮಾನಗಳು ಆರು ಕಿಲೋಮೀಟರ್ ಉದ್ದದ ಹಮಾಸ್ ಹೋರಾಟಗಾರರ 120 ತಾಣಗಳ ಮೇಲೆ ದಾಳಿ ನಡೆಸಿವೆ ಎಂದು ಇಸ್ರೇಲ್ ರಕ್ಷಣಾ ಪಡೆಗಳು ಸ್ಪಷ್ಟಪಡಿಸಿವೆ.
ಐಡಿಎಫ್ ಬಿಡುಗಡೆ ಮಾಡಿರುವ ದೃಶ್ಯಾವಳಿಗಳಲ್ಲಿ, ಗಾಝಾಪಟ್ಟಿಯ ಹಲವು ಕಡೆಗಳಲ್ಲಿ ಇಸ್ರೇಲ್ ಬಾಂಬ್ ದಾಳಿ ನಡೆಸಿದ್ದು, ಇದಾದ ಬಳಿಕ ಇಡೀ ಪ್ರದೇಶದಲ್ಲಿ ಬೆಂಕಿ ಮತ್ತು ದಟ್ಟ ಹೊಗೆ ವ್ಯಾಪಿಸಿರುವುದು ಕಂಡುಬರುತ್ತಿದೆ. "ದಾಳಿಗೆ ಒಳಗಾದ ತಾಣಗಳಲ್ಲಿ ಹಮಾಸ್ ಹೋರಾಟಗಾರರ ಶಸ್ತ್ರಾಸ್ತ್ರ ದಾಸ್ತಾನು ವ್ಯವಸ್ಥೆ, ಸೇನಾ ಮೂಲಸೌಕರ್ಯ ವ್ಯವಸ್ಥೆಗಳು, ದಾಳಿ ಮಾಡುವ ತಾಣಗಳು, ಅಡಗು ತಾಣಗಳು ಮತ್ತು ಇತರ ಮೂಲಸೌಕರ್ಯಗಳು ಸೇರಿವೆ" ಎಂದು ಐಡಿಎಫ್ ವಿವರಿಸಿದೆ.
ಇಸ್ರೇಲ್ ರವಿವಾರ ನಡೆಸಿದ ದಾಳಿಯಲ್ಲಿ ಕನಿಷ್ಠ 33 ಮಂದಿ ಜೀವ ಕಳೆದುಕೊಂಡಿದ್ದಾರೆ ಎಂದು ಗಾಝಾದ ನಾಗರಿಕ ರಕ್ಷಣಾ ಏಜೆನ್ಸಿ ಹೇಳಿದೆ. ಒಂಬತ್ತು ದಿನಗಳ ಕದನ ವಿರಾಮವನ್ನು ಹಮಾಸ್ ಉಲ್ಲಂಘಿಸಿದ್ದಾಗಿ ಆರೋಪಿಸಿ ಇಸ್ರೇಲ್ ಈ ದಾಳಿ ನಡೆಸಿದೆ.





