ಸಿಖ್ಖರ ಬಗ್ಗೆ ರಾಹುಲ್ ಗಾಂಧಿ ಹೇಳಿಕೆಗೆ ಖಾಲಿಸ್ತಾನ್ ಮುಖಂಡ ಪನ್ನೂನ್ ಬೆಂಬಲ

Photo: X/ firstpost
ವಾಷಿಂಗ್ಟನ್ : ಭಾರತದಲ್ಲಿ ಸಿಖ್ ಸಮುದಾಯದ ಸ್ಥಿತಿಗತಿಯ ಬಗ್ಗೆ ಅಮೆರಿಕ ಪ್ರವಾಸದಲ್ಲಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನೀಡಿದ ಹೇಳಿಕೆಯನ್ನು ಖಾಲಿಸ್ತಾನ್ ಪ್ರತ್ಯೇಕತಾವಾದಿ ಮುಖಂಡ ಗುರುಪತ್ವಂತ್ ಸಿಂಗ್ ಪನ್ನೂನ್ ಬೆಂಬಲಿಸಿರುವುದಾಗಿ ವರದಿಯಾಗಿದೆ.
ವಾಷಿಂಗ್ಟನ್ ಡಿಸಿಯ ಬಳಿಯ ಹೆರ್ನ್ಡಾನ್ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ಗಾಂಧಿ `ಭಾರತದಲ್ಲಿ ಹೋರಾಟ ಎಂಬುದು ಕೇವಲ ರಾಜಕೀಯಕ್ಕೆ ಸೀಮಿತವಾಗಿಲ್ಲ. ಸಿಖ್ಖರು ಪೇಟ(ಟರ್ಬನ್), ಕಡಗ ಧರಿಸಬಹುದೇ, ಗುರುದ್ವಾರಕ್ಕೆ ಹೋಗಬಹುದೇ ಎಂಬ ಬಗ್ಗೆಯೂ ಭಾರತದಲ್ಲಿ ಹೋರಾಟ ನಡೆಯುವ ಪರಿಸ್ಥಿತಿಯಿದೆ. ಕೇವಲ ಸಿಖ್ಖರು ಮಾತ್ರವಲ್ಲ ಮೂಲಭೂತ ಹಕ್ಕಾದ ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ಎಲ್ಲಾ ಧರ್ಮೀಯರೂ ಹೋರಾಟ ಮಾಡಬೇಕಾದ ಪರಿಸ್ಥಿತಿಯಿದೆ' ಎಂದಿದ್ದರು.
`ರಾಹುಲ್ ಗಾಂಧಿಯ ದಿಟ್ಟ ಮತ್ತು ಪ್ರವರ್ತನಕಾರಿ ಹೇಳಿಕೆಯನ್ನು ಬೆಂಬಲಿಸುವುದಾಗಿ ಸಿಖ್ಸ್ ಫಾರ್ ಜಸ್ಟಿಸ್(ಎಸ್ಎಫ್ಜೆ) ಸ್ಥಾಪಕ ಗುರುಪತ್ವಂತ್ ಸಿಂಗ್ ಪನ್ನೂನ್ ಪೋಸ್ಟ್ ಮಾಡಿದ್ದಾನೆ. `ಈ ಹೇಳಿಕೆಯು 1947ರಿಂದ ಸತತ ಆಡಳಿತದಲ್ಲಿ ಸಿಖ್ಖರು ಎದುರಿಸುತ್ತಿರುವ ವಾಸ್ತವಿಕ ಇತಿಹಾಸವನ್ನು ತೆರೆದಿಟ್ಟಿದ್ದು ಸಿಖ್ಖರಿಗೆ ಇರುವ ಅಸ್ತಿತ್ವವಾದದ ಅಪಾಯದ ಬಗ್ಗೆ ಬೆಳಕು ಚೆಲ್ಲಿದೆ. ಅಲ್ಲದೆ ಸಿಖ್ಖ್ ತಾಯ್ನಾಡು ಖಾಲಿಸ್ತಾನವನ್ನು ಸ್ಥಾಪಿಸಲು ನಡೆಸುವ `ಸ್ವತಂತ್ರ ಪಂಜಾಬ್ ಜನಾಭಿಪ್ರಾಯ ಸಂಗ್ರಹ'ವನ್ನು ಸಮರ್ಥಿಸುವ ಎಸ್ಎಫ್ಜೆಯ ನಿಲುವನ್ನು ದೃಢೀಕರಿಸುತ್ತದೆ' ಎಂದು ಪನ್ನೂನ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾನೆ.







