ಎಕ್ಸ್ ಮೇಲೆ ಪ್ರಮುಖ ಸೈಬರ್ ದಾಳಿ: ಮಸ್ಕ್

PC: x.com/Avinash_AV25
ವಾಷಿಂಗ್ಟನ್: ವಿಶ್ವದ ಅತಿದೊಡ್ಡ ಸಾಮಾಜಿಕ ಜಾಲತಾಣವಾಗಿರುವ ಎಕ್ಸ್ ಸೇವೆಗಳು ಜಾಗತಿಕವಾಗಿ ಹಲವು ದೇಶಗಳಲ್ಲಿ ಸ್ಥಗಿತಗೊಂಡ ಬೆನ್ನಲ್ಲೇ ಹೇಳಿಕೆ ನೀಡಿರುವ ಸಿಇಓ ಎಲಾನ್ ಮಸ್ಕ್, ಮೈಕ್ರೋಬ್ಲಾಗಿಂಗ್ ಜಾಲತಾಣ ವೇದಿಕೆಯ ಮೇಲೆ ಭಾರಿ ಸೈಬರ್ ದಾಳಿ ನಡೆದಿದೆ ಎಂದು ಪ್ರಕಟಿಸಿದ್ದಾರೆ. ಈ ದಾಳಿಯಲ್ಲಿ ಬೃಹತ್, ಸಂಘಟಿತ ಗುಂಪು ಅಥವಾ ಒಂದು ದೇಶದ ಕೈವಾಡ ಇರಬಹುದು ಎಂದು ಅವರು ಶಂಕಿಸಿದ್ದಾರೆ.
"ಪತ್ತೆ ಮಾಡಲಾಗುತ್ತಿದೆ.." ಎಂದು ಮಸ್ಕ್ ಎಕ್ಸ್ ಪೋಸ್ಟ್ ನಲ್ಲಿ ಹೇಳಿದ್ದಾರೆ. ಇದಕ್ಕೂ ಮುನ್ನ ಸೋಮವಾರವಿಡೀ ಮಸ್ಕ್ ಮಾಲೀಕತ್ವದ ಜಾಲತಾಣ ಹಲವು ಕಡೆ ಸ್ಥಗಿತಗೊಂಡಿತ್ತು ಎಂದು ಡೌನ್ ಡಿಟೆಕ್ಟರ್ ವರದಿ ಮಾಡಿದೆ. ಅಮೆರಿಕದ ಅಸಂಖ್ಯಾತ ಮಂದಿ ತಮ್ಮ ಹ್ಯಾಂಡಲ್ ಗಳು ಸ್ಥಗಿತಗೊಂಡಿರುವ ಬಗ್ಗೆ ಹೇಳಿಕೊಂಡಿದ್ದಾರೆ.
ಸ್ಥಗಿತಗೊಂಡ ಬಗ್ಗೆ ಸುಮಾರು 26,579 ಮಂದಿ ವರದಿ ಮಾಡಿದ್ದಾರೆ ಎಂದು ಸ್ಥಗಿತ ಟ್ರ್ಯಾಕರ್ ವೆಬ್ ಸೈಟ್ ಹೇಳಿದೆ. ಈ ಸಂಖ್ಯೆ ಸೋಮವಾರ 40 ಸಾವಿರವನ್ನು ದಾಟಿದೆ ಎಂದು ವೆಬ್ ಸೈಟ್ ವಿವರಿಸಿದೆ.
ಬ್ರಿಟನ್ ನಲ್ಲಿ ಸುಮಾರು 10,800 ಮಂದಿ ತಮ್ಮ ಖಾತೆಗಳು ಸ್ಥಗಿತಗೊಂಡಿರುವ ಬಗ್ಗೆ ವರದಿ ಮಾಡಿದ್ದಾರೆ. ಆದರೆ ಇದಕ್ಕೆ ಕಾರಣ ತಕ್ಷಣಕ್ಕೆ ತಿಳಿದು ಬಂದಿಲ್ಲ.
ಎಕ್ಸ್ ಟೈಮ್ ಲೈನ್ ಗಳಲ್ಲಿ ಪೇಜ್ ಲೋಡ್ ಮಾಡಲು ಅಥವಾ ರಿಫ್ರೆಶ್ ಸಾಧ್ಯವಾಗುತ್ತಿಲ್ಲ ಎಂದು ಹಲವು ಮಂದಿ ಬಳಕೆದಾರರು ದೂರಿದ್ದಾರೆ. ಆದರೂ ಜಾಗತಿಕ ಸ್ಥಗಿತದ ಬಳಿಕ ಮೈಕ್ರೋಬ್ಲಾಗಿಂಗ್ ಪ್ಲಾಟ್ ಫಾರಂನ ಸೇವೆಗಳು ಅಲ್ಪಕಾಲದಲ್ಲೇ ಯಥಾಸ್ಥಿತಿಗೆ ಬಂದಿವೆ.







