ಕೆಂಪು ಸಮುದ್ರದಲ್ಲಿ ಎರಡು ಹಡಗುಗಳ ಮೇಲೆ ಕ್ಷಿಪಣಿ ದಾಳಿ
ಸಾಂದರ್ಭಿಕ ಚಿತ್ರ Photo : NDTV
ಸನಾ : ಯೆಮನ್ ಬಳಿಯ ಕೆಂಪು ಸಮುದ್ರದಲ್ಲಿ ಪ್ರಯಾಣಿಸುತ್ತಿದ್ದ ತೈಲ ಟ್ಯಾಂಕರ್ ನೌಕೆ ಹಾಗೂ ವಾಣಿಜ್ಯ ನೌಕೆಗಳ ಮೇಲೆ ಸೋಮವಾರ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆದಿರುವುದಾಗಿ ಸಮುದ್ರ ಭದ್ರತೆಗೆ ಸಂಬಂಧಿಸಿದ ಬ್ರಿಟನ್ನ ಆಂಬ್ರೆ ಏಜೆನ್ಸಿ ವರದಿ ಮಾಡಿದೆ.
ಪನಾಮಾದ ಧ್ವಜ ಹೊಂದಿದ್ದ ತೈಲ ಟ್ಯಾಂಕರ್ ನೌಕೆಯ ಮೇಲೆ ಯೆಮನ್ನ ಸಲೀಫ್ ಬಂದರಿನ ವಾಯವ್ಯಕ್ಕೆ ಸುಮಾರು 70 ನಾಟಿಕಲ್ ಮೈಲು ದೂರದಲ್ಲಿ ಕ್ಷಿಪಣಿ ದಾಳಿ ನಡೆದಿದ್ದು ಯಾವುದೇ ಸಾವು-ನೋವು ವರದಿಯಾಗಿಲ್ಲ. ನೌಕೆಯ ಹೆಸರು ಇಸ್ರೇಲ್ನ ಬಂದರೊಂದರ ಹೆಸರನ್ನು ಹೊಂದಿದ್ದರಿಂದ ದಾಳಿ ನಡೆದಿದೆ' ಎಂದು ಮಿಲಿಟರಿ ಅಧಿಕಾರಿಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.
ಮತ್ತೊಂದು ಘಟನೆಯಲ್ಲಿ ಯೆಮನ್ನ ಹೊದೈದಾ ಬಂದರಿನ ಸುಮಾರು 50 ನಾಟಿಕಲ್ ಮೈಲುಗಳಷ್ಟು ದೂರದಲ್ಲಿದ್ದ ವಾಣಿಜ್ಯ ಹಡಗೊಂದನ್ನು ಗುರಿಯಾಗಿಸಿ ಡ್ರೋನ್ ದಾಳಿ ನಡೆದಿದೆ. ದಾಳಿಯಲ್ಲಿ ಹಡಗಿಗೆ ಯಾವುದೇ ಹಾನಿಯಾಗಿಲ್ಲ, ಹಡಗು ನಿಗದಿತ ರೀತಿಯಲ್ಲಿ ಪ್ರಯಾಣ ಮುಂದುವರಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.